ನವದೆಹಲಿ: ಪಠಾಣ್ ಕೋಟ್ ವಾಯು ನೆಲೆಯಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತು ಬಹಿರಂಗವಾಗಿರುವ ತಾಜಾ ಸುದ್ದಿ ಕಾಂಗ್ರೆಸ್ ಪಕ್ಷ ತೀವ್ರ ಮುಜುಗರ ಎದುರಿಸುವ ಪರಿಸ್ಥಿತಿ ಉಂಟು ಮಾಡುವ ಸಾಧ್ಯತೆ ಇದೆ.
ಜೈಶ್-ಎ-ಮೊಹಮ್ಮದ್ ನ ಭಯೋತ್ಪಾದಕ ಶಾಹಿದ್ ಲತೀಫ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿಯ ಪ್ರಮುಖ ಅಪರಾಧಿಯಾಗಿದ್ದು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ಉತ್ತಮಗೊಳಿಸುವ ಸಲುವಾಗಿ 2010 ರಲ್ಲಿ ಯುಪಿಎ ಸರ್ಕಾರ ಶಾಹಿದ್ ಲತೀಫ್ ನನ್ನು ಬಿಡುಗಡೆ ಮಾಡಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಶಾಹಿದ್ ಲತೀಫ್ ಅವನೊಂದಿಗೆ ಯುಪಿಎ ಸರ್ಕಾರ ಜೈಶ್-ಎ-ಮೊಹಮ್ಮದ್ ನ 24 ಉಗ್ರರನ್ನು ಬಿಡುಗಡೆ ಮಾಡಿತ್ತು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕರಿಂದ ವಿಮಾನ ಅಪಹರಣ(ಐಸಿ-184 ) ಪ್ರಕರಣದಲ್ಲೂ ಜೈಶ್-ಎ- ಮೊಹಮ್ಮದ್ ಸಂಘಟನೆ ಲತೀಫ್ ನನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿತ್ತು. ಆದರೆ ಇದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಒಪ್ಪಿರಲಿಲ್ಲ. ಹಿಂದಿನ ಸರ್ಕಾರ ಒಪ್ಪದೇ ಇದ್ದರೂ ಯುಪಿಎ ಸರ್ಕಾರ ಉಗ್ರ ಲತೀಫ್ ನನ್ನು ಬಿಡುಗಡೆ ಮಾಡಿದ್ದರಿಂದ ಯುಪಿಎ ಸರ್ಕಾರ ಮುಜುಗರ ಎದುರಿಸುವಂತಾಗಿದೆ.
ಶಾಹಿದ್ ಲತೀಫ್ ನ ಬಿದುಗಡೆಯಿಂದ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧ ಸುಧಾರಣೆಯಾಗಲಿದೆ ಎಂದು ಪಾಕಿಸ್ತಾನ ಅಭಿಪ್ರಾಯಪಟ್ಟಿದ್ದರಿಂದ ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಭಾರತದ ವಿವಿಧ ಜೈಲುಗಳಲ್ಲಿ 11 ವರ್ಷ ಇದ್ದ ಭಯೋತ್ಪಾದಕ ಶಾಹಿದ್ ಲತೀಫ್ ನನ್ನು 2010 ರ ಮೇ ನಲ್ಲಿ ಬಿಡುಗಡೆ ಮಾಡಿತ್ತು. ಈಗ ಇದೇ ಕಾಂಗ್ರೆಸ್ ಪಾಲಿಗೆ ಮುಳುವಾಗಿ ಪರಿಣಮಿಸಿದೆ.