ಅಂತರಾಷ್ಟ್ರೀಯ

ಭಾರತ-ವಿಯೆಟ್ನಾಂ ತೈಲ ಒಪ್ಪಂದ ಚೀನಾ ತಕರಾರು

Pinterest LinkedIn Tumblr

hong_lie-final

ಬೀಜಿಂಗ್, ಸೆ.16: ಎರಡು ಹೆಚ್ಚುವರಿ ತೈಲಬಾವಿ ಗಳನ್ನು ತೆರೆಯಲು ಒಎನ್‌ಜಿಸಿಗೆ ಅವಕಾಶ ಕಲ್ಪಿಸುವ ಭಾರತ-ವಿಯೆಟ್ನಾಂ ತೈಲ ಒಪ್ಪಂದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಚೀನಾವು, ಒಂದು ವೇಳೆ ಒಪ್ಪಂದದಲ್ಲಿ ಬರುವ ತೈಲ ಶೋಧನಾ ಪ್ರದೇಶವು ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದ್ದಲ್ಲಿ ಅದನ್ನು ತಾನು ಆಕ್ಷೇಪಿಸುವುದಾಗಿ ತಿಳಿಸಿದೆ.

ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಪ್ರಸಕ್ತ ಚೀನಾ ಭೇಟಿಯ ವೇಳೆ ಸಹಿ ಹಾಕಲಾಗಿರುವ ಒಪ್ಪಂದದ ಬಗ್ಗೆ ಕೇಳಲಾದ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹಾಂಗ್ ಲೀ ಈ ಹೇಳಿಕೆ ನೀಡಿದ್ದಾರೆ.

ವಿಯೆಟ್ನಾಂ ಹಾಗೂ ಇತರ ಯಾವುದೇ ತೃತೀಯ ರಾಷ್ಟ್ರದ ನಡುವಿನ ಒಪ್ಪಂದವು ‘ಕಾನೂನುಬದ್ಧ ಹಾಗೂ ನ್ಯಾಯಸಮ್ಮತ’ವಾಗಿದ್ದಲ್ಲಿ ಅದರ ಬಗ್ಗೆ ಚೀನಾದ ಯಾವುದೇ ಆಕ್ಷೇಪವಿಲ್ಲ ಎಂದವರು ಹೇಳಿದ್ದಾರೆ.

‘‘ಭಾರತದ ರಾಷ್ಟ್ರಪತಿಯವರ ವಿಯೆಟ್ನಾಂ ಭೇಟಿಯನ್ನು ನಾವು ಗಮನಿಸಿದ್ದೇವೆ. ನನ್‌ಶಾ ದ್ವೀಪಗಳು ಹಾಗೂ ಅದರ ಸುತ್ತಮುತ್ತಲಿನ ಜಲಪ್ರದೇಶಗಳಿಗೆ ಸಂಬಂಧಿಸಿ ಚೀನಾವು ವಿವಾದಾತೀತ ಸೌರ್ವಭೌಮತೆಯನ್ನು ಹೊಂದಿದೆ’’ ಎಂದವರು ಹೇಳಿದ್ದಾರೆ.

‘‘ವಿಯೆಟ್ನಾಂ ಹಾಗೂ ಇನ್ನೊಂದು ರಾಷ್ಟ್ರದ ನಡುವಿನ ಕಾನೂನುಬದ್ಧ ಹಾಗೂ ನ್ಯಾಯಸಮ್ಮತ ಒಪ್ಪಂದದ ಬಗ್ಗೆ ನಮ್ಮ ಯಾವುದೇ ಆಕ್ಷೇಪವಿಲ್ಲ. ಆದರೆ ಒಂದು ವಿಷಯ ಸ್ಪಷ್ಟ. ಇಂತಹ ಒಪ್ಪಂದಗಳು ಚೀನಾ ಆಡಳಿತದ ಜಲಪ್ರದೇಶಕ್ಕೆ ಸಂಬಂಧಿಸಿದ್ದರೆ ಅಥವಾ ಇಂತಹ ಸಹಕಾರ ಯೋಜನೆಗಳು ಚೀನಾ ಸರಕಾರದಿಂದ ಅಂಗೀಕಾರಗೊಂಡಿರ ದಿದ್ದಲ್ಲಿ, ಆಗ ಅಂತಹ ಒಪ್ಪಂದಗಳನ್ನು ಚೀನಾ ಪುರಸ್ಕರಿಸುವುದಿಲ್ಲ’’ ಎಂದು ಹೇಳಿದ್ದಾರೆ.

ತನ್ನದು ನಿರ್ದಿಷ್ಟವಾಗಿ ಭಾರತಕ್ಕೆ ಸಂಬಂಧಪಟ್ಟ ನಿಲುವು ಆಗಿರದೆ, ವಿಯೆಟ್ನಾಂ ಹಾಗೂ ಇತರ ಯಾವುದೇ ರಾಷ್ಟ್ರದ ನಡುವಿನ ತೈಲಶೋಧನೆ ಒಪ್ಪಂದಗಳಿಗೆ ಸಂಬಂಧಪಟ್ಟ ನಿಲುವಾಗಿದೆ ಎಂದು ಭಾರತೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗುರುವಾರ ಭಾರತಕ್ಕೆ ನೀಡಲಿರುವ ಭೇಟಿಯ ಹಿನ್ನೆಲೆಯಲ್ಲಿ ಚೀನಾದ ಈ ಹೇಳಿಕೆ ಹೆಚ್ಚಿನ ಮಹತ್ವ ಪಡೆಯಲಿದೆ. ಈ ಹಿಂದೆ ವಿಯೆಟ್ನಾಂ ಒಎನ್‌ಜಿಸಿಗೆ ವಿತರಿಸಿದ್ದ ತೈಲಬಾವಿಯ ಬಗ್ಗೆಯೂ ಚೀನಾ ಇದೇ ರೀತಿಯ ಆಕ್ಷೇಪ ವ್ಯಕ್ತಪಡಿಸಿತ್ತು. ದಕ್ಷಿಣ ಚೀನಾ ಸಮುದ್ರ ಪ್ರದೇಶದ ಬಹುಭಾಗವನ್ನು ಚೀನಾ ತನ್ನದೆಂದು ಹೇಳಿಕೊಳ್ಳುತ್ತಿದೆ.

ಚೀನಾದ ಸಾರ್ವಭೌಮತೆಯ ಬಗ್ಗೆ ವಿಯೆಟ್ನಾಂ, ಫಿಲಿಪ್ಪೀನ್ಸ್, ಮಲೇಶ್ಯ ಹಾಗೂ ಹನೊಯಿ ಬಲವಾಗಿ ವಿರೋಧಿಸಿವೆ. ಕಳೆದ ವರ್ಷ ಮೇಯಲ್ಲಿ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಪ್ರಮುಖ ತೈಲಬಾವಿಯೊಂದನ್ನು ಕೊರೆಯಲು ನಡೆಸಿದ್ದ ಬೀಜಿಂಗ್‌ನ ಯತ್ನವನ್ನು ವಿಯೆಟ್ನಾಂ ವಿರೋಧಿಸಿದ್ದ ವೇಳೆ ಉಭಯ ರಾಷ್ಟ್ರಗಳ ನಡುವೆ ವಿವಾದ ಸೃಷ್ಟಿಯಾಗಿತ್ತು.

ತತ್ಪರಿಣಾಮ ಉಂಟಾದ ಉಭಯ ಪಕ್ಷಗಳ ನಡುವಿನ ಸಂಘರ್ಷಕ್ಕೆ ನಾಲ್ವರು ಚೀನಿಯರು ಬಲಿಯಾಗಿದ್ದರು ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದೇ ವೇಳೆ ಚೀನಾ ಆಡಳಿತ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 400ಕ್ಕೂ ಅಧಿಕ ಕಾರ್ಖಾನೆಗಳನ್ನು ಸುಟ್ಟುಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣೆಯ ಭೀತಿಯಿಂದ ವಿಯೆಟ್ನಾಂನಲ್ಲಿದ್ದ ತನ್ನ 7 ಸಾವಿರಕ್ಕೂ ಅಧಿಕ ಪ್ರಜೆಗಳನ್ನು ಚೀನಾ ವಾಪಸ್ ಕರೆಸಿಕೊಂಡಿತ್ತು.

Write A Comment