ಜಿದ್ದಾ, ಸೆ.19: ಇಸ್ರೇಲ್‌ನ ದಾಳಿಯಿಂದ ಅಪಾರ ಹಾನಿಗೀಡಾಗಿರುವ ಗಾಝಾಪಟ್ಟಿಯ ಮರುನಿರ್ಮಾಣ ಕಾರ್ಯಕ್ಕೆ ಪೂರಕವಾಗಿ ಸೌದಿ ಅರೇಬಿಯವು 500 ದಶಲಕ್ಷ ಡಾಲರ್ ನೆರವು ಘೋಷಿಸಿದೆ ಎಂದು ಫೆಲೆಸ್ತೀನ್‌ನ ಪ್ರಧಾನಿ ರಮಿ ಅಲ್ ಹಮ್ದಲ್ಲಾ ಗುರುವಾರ ತಿಳಿಸಿದ್ದಾರೆ.
ಗಾಝಾ ಪುನರುತ್ಥಾನ ಕಾರ್ಯಕ್ಕೆ ಸುಮಾರು 400 ಕೋಟಿ ಡಾಲರ್ ಒಟ್ಟು ವೆಚ್ಚ ಹಾಗೂ ಕನಿಷ್ಠ ಮೂರು ವರ್ಷಗಳ ಕಾಲಾವಕಾಶ ಬೇಕಾಗಬಹುದೆಂದು ಅಂದಾಜಿಸಲಾಗಿದೆ.
ಅಕ್ಟೋಬರ್ 12ರಂದು ಕೈರೊದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಟರ್ಕಿ, ಕತರ್, ಐರೋಪ್ಯ ಒಕ್ಕೂಟ ಹಾಗೂ ಅಮೆರಿಕ ಕೂಡಾ ಗಾಝಾ ಮರುನಿರ್ಮಾಣಕ್ಕೆ ಆರ್ಥಿಕ ನೆರವು ಘೋಷಿಸಬಹುದೆಂದು ಫೆಲೆಸ್ತೀನಿ ಮುಖಂಡರು ನಿರೀಕ್ಷಿಸಿದ್ದಾರೆ.
ಸೌದಿ ಅರೇಬಿಯವು 500 ದಶಲಕ್ಷ ಡಾಲರ್ ನೆರವು ಘೋಷಿಸಿದೆ ಎಂದು ಗಾಝಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫೆಲೆಸ್ತೀನ್ ಪ್ರಧಾನಿ ತಿಳಿಸಿದ್ದಾರೆ.
ಇತ್ತೀಚೆಗೆ ಇಸ್ರೇಲ್ ನಡೆಸಿದ ಏಳು ವಾರಗಳ ಅವಧಿಯ ಭೀಕರ ದಾಳಿಗಳಿಗೆ ಸುಮಾರು 18 ಸಾವಿರ ಫೆಲೆಸ್ತೀನಿ ಮನೆಗಳು ಧ್ವಂಸಗೊಂಡಿದ್ದು, ಇತರ 40 ಸಾವಿರ ಮನೆಗಳು ಹಾನಿಗೊಂಡಿರಬಹುದೆಂದು ಅಂದಾಜಿಸಲಾಗಿದೆ.