ನ್ಯೂಯಾರ್ಕ್, ಸೆ.29: ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿ ರವಿವಾರ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್‌ನ ತನ್ನ ಸೋದ್ಯೋಗಿ ಬೆಂಜಮಿನ್ ನೆತನ್ಯಾಹುರನ್ನು ಭೇಟಿಯಾಗಿ ರಕ್ಷಣೆ ಸಹಕಾರ ಹಾಗೂ ಐಸಿಸ್ ಬಂಡುಕೋರರಿಂದ ಪಶ್ಚಿಮ ಏಶ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದರು.
ಸುಮಾರು 30 ನಿಮಿಷಗಳ ಕಾಲ ನಡೆದ ಮಾತುಕತೆಯ ವೇಳೆ ಇಸ್ರೇಲ್‌ಗೆ ಶೀಘ್ರದಲ್ಲೇ ಭೇಟಿ ನೀಡುವಂತೆ ಮೋದಿಯವರಿಗೆ ನೆತನ್ಯಾಹು ಆಹ್ವಾನ ನೀಡಿದರು.
ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ವೇಳೆ ಇಸ್ರೇಲ್‌ಗೆ ಭೇಟಿ ನೀಡಿರುವುದನ್ನು ನೆನಪಿಸಿಕೊಂಡ ನೆತನ್ಯಾಹು, ಪ್ರಧಾನಿಯಾಗಿಯೂ ಇಸ್ರೇಲ್‌ಗೆ ಮೋದಿಯವರು ಆಗಮಿಸಬೇಕೆಂದು ಆಶಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ಮೋದಿಯವರು ತನ್ನ ಆಹ್ವಾನವನ್ನು ಪರಿಶೀಲಿಸುವುದಾಗಿ ಹಾಗೂ ಈ ಬಗ್ಗೆ ರಾಜತಾಂತ್ರಿಕ ನೆಲೆಗಳಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
ಆರ್ಥಿಕ ಸಹಕಾರ ವರ್ಧನೆ ಬಗ್ಗೆ ಉಭಯ ನಾಯಕರು ಚರ್ಚಿಸಿದರು ಎಂದು ತಿಳಿಸಿರುವ ವಕ್ತಾರ, ನೀರಿನ ನಿರ್ವಹಣೆ ಹಾಗೂ ಇತರ ಕೃಷಿ ಸಂಬಂಧಿ ಕ್ಷೇತ್ರಗಳ ಬಗೆಗಿನ ಅನುಭವವನ್ನು ಹಂಚಿಕೊಳ್ಳುವ ಭರವಸೆಯನ್ನು ಇಸ್ರೇಲ್ ನೀಡಿದೆ ಎಂದು ಹೇಳಿದ್ದಾರೆ. ಇವೆಲ್ಲಕ್ಕಿಂತ ಮಿಗಿಲಾಗಿ ಪಶ್ಚಿಮ ಏಶ್ಯ ಪ್ರದೇಶದಲ್ಲಿ ಇಸ್ರೇಲ್ ಹೇಗೆ ಅಭಿವೃದ್ಧಿಯನ್ನು ಸಾಧಿಸಿದೆ ಎಂಬ ವಿಷಯದ ಕುರಿತು ಚರ್ಚಿಸಲಾಯಿತು ಎಂದವರು ತಿಳಿಸಿದ್ದಾರೆ.
ಇರಾನ್ ಮತ್ತು ಪಿ5+1 ಸಮೂಹದ ನಡುವೆ ನಡೆಯುತ್ತಿರುವ ಮಾತುಕತೆಗಳ ಬಗೆಗಿನ ತನ್ನ ದೃಷ್ಟಿಕೋನವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದೇ ವೇಳೆ ಭಾರತದ ಪ್ರಧಾನಿಗೆ ತಿಳಿಸಿದರು ಎಂದವರು ಹೇಳಿದ್ದಾರೆ.
ಭಾರತ ಹಾಗೂ ಇಸ್ರೇಲ್ ನಡುವಿನ ಸಂಬಂಧವು ಗಾಢವಾಗಿದೆ ಮತ್ತು ಉಭಯ ರಾಷ್ಟ್ರಗಳ ನಡುವಿನ ಪ್ರಸಕ್ತ ವಹಿವಾಟು ವಾರ್ಷಿಕ ಸುಮಾರು 600 ಕೋಟಿ ಡಾಲರ್ ನಷ್ಟಾಗಿದೆ ಎಂದವರು ವಿವರಿಸಿದ್ದಾರೆ.
ಉಭಯ ಮುಖಂಡರು ರಕ್ಷಣಾ ಸಹಕಾರಕ್ಕೆ ಸಂಬಂಧಿಸಿ ಮಾತುಕತೆ ನಡೆಸಿರುವರಾದರೂ, ‘ಮೇಕ್ ಇನ್ ಇಂಡಿಯಾ’ಕ್ಕೆ ಭಾರತದ ಹೆಚ್ಚಿನ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿರುವುದಾಗಿ ವಕ್ತಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ರಾಜತಾಂತ್ರಿಕ ಮೂಲಗಳ ಪ್ರಕಾರ, ಭಾರತ ಹಾಗೂ ಇಸ್ರೇಲ್ ಪ್ರಧಾನಿ ನಡುವಿನ ಭೇಟಿಯು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ನಡೆದುದಾಗಿದೆ.