ಲಂಡನ್, ಅ.8: ‘ಆಪ್ಟಿಕಲ್ ಮೈಕ್ರೊಸ್ಕೋಪನ್ನು ನ್ಯಾನೊಸ್ಕೋಪ್ ಆಗಿ ಪರಿವರ್ತನೆ’ ಮಾಡುವಲ್ಲಿ ಮಹತ್ವದ ಕೊಡುಗೆ ನೀಡಿರುವ ಅಮೆರಿಕದ ಇಬ್ಬರು ವಿಜ್ಞಾನಿಗಳು ಮತ್ತು ಓರ್ವ ಜರ್ಮನ್ ವಿಜ್ಞಾನಿಗೆ 2014ನೆ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಲಭಿಸಿದೆ.
ಆಶ್‌ಬರ್ನ್‌ನ ಹೋವಾರ್ಡ್ ಹ್ಯೂಸ್ ವೈದ್ಯಕೀಯ ಸಂಸ್ಥೆಯ ಎರಿಕ್ ಬೆಟ್ಝಿಗ್, ಗೊಟ್ಟಿನ್ಜಿನ್‌ನ ಮ್ಯಾಕ್ಸ್ ಪ್ಲಾಂಕ್ ಇನ್ಸ್‌ಟಿಟ್ಯೂಟ್ ಫಾರ್ ಬಯೋಫಿಸಿಕಲ್ ಕೆಮೆಸ್ಟ್ರಿಯ ಸ್ಟೀಫನ್ ಡಬ್ಲು ಹೆಲ್ ಮತ್ತು ಸ್ಟಾನ್‌ಫೋರ್ಡ್ ವಿವಿಯ ವಿಲಿಯಂ ಇ.ಮಾರ್ನರ್ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಆಪ್ಟಿಕಲ್ ಮೈಕ್ರೊಸ್ಕೋಪಿಗೆ ಬಹಳಷ್ಟು ಮಿತಿಗಳಿವೆ ಎಂದು ದೀರ್ಘ ಸಮಯದಿಂದ ತಿಳಿಯಲಾಗಿತ್ತು. ಬೆಳಕಿನ ಅರ್ಧದಷ್ಟು ತರಂಗಾಂತರಕ್ಕಿಂತ ಉತ್ತಮ ಗುಣಮಟ್ಟದ ಚಿತ್ರಗಳನ್ನು ಪಡೆಯುವುದು ಅಸಾಧ್ಯವೆಂದೇ ಈವರೆಗೆ ಭಾವಿಸಲಾಗಿತ್ತು. ಪ್ರತಿದೀಪಕ ಅಣುಗಳ ನೆರವಿನಿಂದ ರಸಾಯನಶಾಸ್ತ್ರ ವಿಜ್ಞಾನಿಗಳು ಬಹು ಚಾತುರ್ಯದಿಂದ ಈ ಮಿತಿಗೆ ಉತ್ತರವನ್ನು ಕಂಡುಕೊಂಡರು. ವಿಜ್ಞಾನಿಗಳ ಮಹತ್ವದ ಸಂಶೋಧನೆಯಿಂದಾಗಿ ಆಪ್ಟಿಕಲ್ ಮೈಕ್ರೊಸ್ಕೋಪ್ ಎಂಬುದು ನ್ಯಾನೊ ರೂಪಂತರ ಪಡೆದುಕೊಂಡಿತು ಎಂದು ರಾಯಲ್ ಸ್ವೀಡಿಷ್ ಅಕಾಡಮಿ ಆಫ್ ಸಯನ್ಸ್ ಅಭಿಪ್ರಾಯಪಟ್ಟಿದೆ.
‘ಅತ್ಯಂತ ದೊಡ್ಡ ಗಾತ್ರದ ಫ್ಲೋರೊಸೆನ್ಸ್ ಮೈಕ್ರೊಸ್ಕೋಪಿಯ ಅವಿಷ್ಕಾರಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ’ ಎಂದು ನೊಬೆಲ್ ಆಯ್ಕೆ ಸಮಿತಿ ತಿಳಿಸಿದೆ.