ಫ್ರೀಟೌನ್: ಮೂರು ದಿನಗಳ ಕಾಲ ಯಾರೂ ಮನೆಯಿಂದ ಹೊರಗೇ ಬರುವಂತಿಲ್ಲ! ಪಶ್ಚಿಮ ಆಫ್ರಿಕಾದ ಸಿಯೋರಾ ಲಿಯೋನ್ ದೇಶ ತನ್ನ ನಾಗರಿಕರಿಗೆ ಇಂತಹುದೊಂದು ಆದೇಶವನ್ನು ಹೊರಡಿಸಿದೆ. ಏಕೆ, ಅಲ್ಲಿ ಕರ್ಫ್ಯೂ ಅಥವಾ `ಕಂಡಲ್ಲಿ ಗುಂಡು’ ಆದೇಶ ನೀಡಲಾಗಿದೆಯೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಖಂಡಿತಾ ಅಲ್ಲ, ಇದೆಲ್ಲ ಎಬೋಲಾ ಮಹಿಮೆ.
ಎಬೊಲಾ ಕಾಯಿಲೆಯು ಈ ದೇಶದಲ್ಲಿ ಎಗ್ಗಿಲ್ಲದೆ ಹರಡುತ್ತಿದ್ದು, ಮಾರ್ಚ್ 27ರಿಂದ 29ರವರೆಗೆ ಬರೋಬ್ಬರಿ 25 ಲಕ್ಷ ಮಂದಿ ಮನೆಯಿಂದ ಹೊರಬರದಂತೆ ನಿರ್ಬಂಧ ಹೇರಲಾಗಿದೆ. ಹೀಗಾಗಿ 3 ದಿನ ಇಲ್ಲಿ ಸಂಪೂರ್ಣ ಬಂದ್. ರೋಗದಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ಜನರಿಗೆ ತಿಳಿಸಿಕೊಡಲು ಹಾಗೂ ಎಬೊಲಾ ವ್ಯಾಪಿಸುವುದನ್ನು ತಡೆಯಲು ಈ ಆದೇಶ ಹೊರಡಿಸಲಾಗಿದೆ.
ಎಬೊಲಾ ಭೀತಿ
ಎಬೊಲಾ ವೈರಸ್ ಈ ವರೆಗೆ ಸಿಯೋರಾ ಲಿಯೋನ್‍ನಲ್ಲಿ ಬರೋಬ್ಬರಿ 3,700 ಮಂದಿಯನ್ನು ಬಲಿತೆಗೆದುಕೊಂಡಿದೆ. ಮಾರಣಾಂತಿಕ ಕಾಯಿಲೆಯಿಂದಾಗಿ ಆರ್ಥಿಕ ಹಾಗೂ ಆರೋಗ್ಯ ಬಿಕ್ಕಟ್ಟು ಎದುರಿಸುತ್ತಿರುವ ಮೂರು ಆರ್ಥಿಕತೆಗಳ ಪೈಕಿ ಈ ದೇಶವೂ ಒಂದು. ಲೈಬೀರಿಯಾದಲ್ಲಿ ಸದ್ಯಕ್ಕೆ ಎಬೊಲಾ ಪ್ರಕರಣ ಕಂಡುಬಂದಿಲ್ಲ. ಸಿಯೋರಾ ಮತ್ತು ಗಿನಿಯಾದಲ್ಲಿ ವೈರಸ್ ವ್ಯಾಪಿಸುವಿಕೆ ಮುಂದುವರಿದಿದೆ. ಕಳೆದ ವರ್ಷದ ಸೆಪ್ಟೆಂಬರ್‍ನಲ್ಲೂ ಇದೇ ರೀತಿ ಜನರಿಗೆ ಮನೆಯಿಂದ ಹೊರಬರದಂತೆ ನಿರ್ಬಂಧ ವಿಧಿಸಲಾಗಿತ್ತು. ಡಿಸೆಂಬರ್ 2013ರಿಂದ ಈವರೆಗೆ ಎಬೊಲಾದಿಂದ 10,200 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಒ) ಬುಧವಾರ ಘೋಷಿಸಿದೆ.
ಎಬೊಲಾ ಮಾರಿಗೆ ಬಲಿಯಾದವರೆಷ್ಟು?
ರಾಷ್ಟ್ರ ಸಾವು
ಗಿನಿಯಾ 2,224
ಲೈಬೀರಿಯಾ 4,264
ಸಿಯೋರಾ ಲಿಯೋನ್ 3,691
ಒಟ್ಟು 10,179ಇದು ಎಬೊಲಾಗೆ ಕಡಿವಾಣ ಹಾಕುವ ಕೊನೆಯ ಪ್ರಯತ್ನ ಎಂದು ಭಾವಿಸಿದ್ದೇನೆ. ಜನರೆಲ್ಲರೂ ಸರ್ಕಾರದ ಆದೇಶವನ್ನು ಪಾಲಿಸಿದರೆ ನಮ್ಮ ಶ್ರಮ ಸಾರ್ಥಕ.