– ಬಸೀರಅಹ್ಮದ್ ನಗಾರಿ
ಸಮಯದೊಂದಿಗೆ ಓಟಕ್ಕಿಳಿದಿರುವ ನಾವೆಲ್ಲರೂ ‘ಸ್ಮಾರ್ಟ್‌ಫೋನ್’ ಅನಿವಾರ್ಯ ಎನ್ನುವಂಥ ಕಾಲ ದಲ್ಲಿದ್ದೇವೆ. ಎಲ್ಲವೂ ತ್ವರಿತವಾಗಿ ಆಗಬೇಕು; ಸುಲಭವಾಗಿ ದಕ್ಕಬೇಕು ಎಂಬಂಥ ಅಮಿತ ಆಸೆ, ಸಾರ್ವತ್ರಿಕ ಅನಿಸಿಕೆ ಸ್ಮಾರ್ಟ್‌ಫೋನ್ ಬಳಕೆಗೆ ಮತ್ತಷ್ಟು–ಮತ್ತಷ್ಟು ಗ್ರಾಸ ಒದಗಿಸುತ್ತಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಕನಸು; ನಮ್ಮ ರಾಜ್ಯ ಸರ್ಕಾರದ ಮೊಬೈಲ್ ಆಡಳಿತ ಅನುಷ್ಠಾನ ಗೊಳಿಸಿರುವುದು ಇದನ್ನು ಪುಷ್ಟೀಕರಿಸುತ್ತದೆ!
ದೇಶದಲ್ಲಿ ದಿನಗಳೆದಂತೆ ಜನರು ಫೀಚರ್ ಫೋನ್‌ಗಳಿಂದ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳಿಗೆ ಅಪ್‌ಡೇಟ್ ಆಗುತ್ತಿದ್ದಾರೆ. ಅದೇ ವೇಗದಲ್ಲಿಯೇ ಆ್ಯಪ್‌ಗಳ ಲಭ್ಯತೆ, ಅಂತರ್ಜಾಲದ ಸೌಲಭ್ಯವೂ ದೊರೆಯುತ್ತಿದೆ. ಮೊದಲು ಮೌಲ್ಯವರ್ಧಿತ ಸೇವೆ ಗಳಾಗಿ ಪರಿಚಯಿಸಿದ ಸೇವಾ ಕಂಪೆನಿಗಳು ಇದೀಗ ಪೂರ್ಣಪ್ರಮಾಣದ ಇಂಟರ್‌ನೆಟ್ ಕಂಪೆನಿಗಳ ಮಟ್ಟಕ್ಕೆ ಬೆಳೆಯುತ್ತಿವೆ.
ಅಣಬೆ ಲೆಕ್ಕದಲ್ಲಿ ಸೃಷ್ಟಿ!
ಕೈ, ಕಾಲು, ಮಾತು-ಕಥೆ… ಹೀಗೆ ಲೆಕ್ಕವಿಲ್ಲ ದಷ್ಟು ಆ್ಯಪ್‌ಗಳು ಮಾರುಕಟ್ಟೆಗೆ ನಿತ್ಯ ಬರುತ್ತಲೇ ಇವೆ. ದೇಶದಲ್ಲಿ 2013ರಲ್ಲಿ ಪ್ರತಿ ಸ್ಮಾರ್ಟ್‌ಫೋನ್ ಸರಾಸರಿ 17 ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ ಕೊಂಡಿದೆ. ಅದರಲ್ಲಿ ನಾಲ್ಕು ಪೇಯ್ಡ್ (ಹಣ ಕೊಟ್ಟು ಖರೀದಿಸಿದ್ದು) ಅಪ್ಲಿಕೇಷನ್‌ಗಳು. ಜಾಗತಿಕವಾಗಿ ಈ ಪ್ರಮಾಣ ಪ್ರತಿ ಸ್ಮಾರ್ಟ್ ಫೋನ್‌ಗೆ 26ರಷ್ಟು ಇದೆ. ಅದರಲ್ಲಿ ಐದು ಆ್ಯಪ್‌ಗಳು ಖರೀದಿಸಿದ್ದವಾಗಿವೆ.
ಭಾರತದಲ್ಲಿ ಪ್ರತಿ ತಿಂಗಳು 10 ಕೋಟಿಗೂ ಅಧಿಕ ಆ್ಯಪ್‌ಗಳು ಡೌನ್‌ಲೋಡ್ ಆಗುತ್ತಿವೆ. ಭಾರತದಲ್ಲಿ 2015ರಲ್ಲಿ ಸುಮಾರು 900 ಕೋಟಿ ಆ್ಯಪ್‌ಗಳ ಡೌನ್‌ಲೋಡ್ ಮಾಡಿಕೊಳ್ಳುವ ನಿರೀಕ್ಷೆಗಳಿವೆ. 2012ಕ್ಕೆ (156 ಕೋಟಿ) ಹೋಲಿಸಿದರೆ ಇದು ಐದು ಪಟ್ಟು ಅಧಿಕ. ಜತೆಗೆ ಭಾರತದಲ್ಲಿ ಆ್ಯಂಡ್ರಾಯಿಡ್ ಆಧಾರಿತ ಆ್ಯಪ್‌ಗಳ ಪ್ರಾಬಲ್ಯ ಮುಂದುವರಿಲಿದೆ ಎಂದು ಡೆಲಾಯ್ಟ್ (Deloitte) ಅಧ್ಯಯನ ವರದಿ ಅಂದಾಜಿಸಿದೆ.
ಕೋಟಿ–ಕೋಟಿ ವ್ಯವಹಾರ
ಆ್ಯಪ್‌ಗಳ ವಹಿವಾಟೂ ಕೋಟಿ–ಕೋಟಿಗಳ ಷ್ಟಿದೆ (ಖರೀದಿಸುವುದಷ್ಟೇ- ಉಚಿತ ಆಪ್ಯ್‌ಗಳನ್ನು ಬಿಟ್ಟು). 2015ರಲ್ಲಿ ಪೇಯ್ಡ್ ಆ್ಯಪ್ ಆದಾಯವೇ ₨1500 ಕೋಟಿಗಳಷ್ಟು ಇರಲಿದೆ ಎಂದು ನಿರೀಕ್ಷಿಸಲಾಗದೆ. 2014ಕ್ಕೆ ಹೋಲಿಸಿದರೆ ಇದು ಗಮನಾರ್ಹ ಏರಿಕೆ. ಕಳೆದ ವರ್ಷ ಪೇಯ್ಡ್ ಆ್ಯಪ್‌ಗಳ ಆದಾಯ ₨900 ಕೋಟಿಗಳಷ್ಟಿತ್ತಂತೆ!
ಅದಾಗ್ಯೂ. ಆ್ಯಪ್ ಡೌನ್‌ಲೋಡ್ ಪ್ರಮಾಣಕ್ಕೆ ಹೋಲಿಸಿದರೆ, ಆದಾಯ ಹಾಗೂ ಬಳಕೆ ವಿಷಯ ದಲ್ಲಿ ತೃಪ್ತಿಕರವಾಗಿಲ್ಲ ಎನ್ನುತ್ತವೆ ವರದಿಗಳು. ಏಕೆಂದರೆ, ಭಾರತದಲ್ಲಿ ಸುಮಾರು ಶೇ 90 ಜನರು ಉಚಿತ ಆ್ಯಪ್ ಡೌನ್‌ಲೋಡ್ ಮಾಡಿಕೊ ಳ್ಳಲು ಆದ್ಯತೆ ನೀಡುತ್ತಾರಂತೆ. ಇದರಿಂದ ಸಹಜ ವಾಗಿ ಆಪ್‌ಗಳ ಮಾರಾಟದಲ್ಲಿ ಆದಾಯ ಕೊರತೆ ಕಂಡುಬರುತ್ತದೆ.
ಇಷ್ಟಾದರೂ, ಭಾರತದಲ್ಲಿ ಆ್ಯಪ್ ಅಭಿವೃದ್ಧಿ ಪಡಿಸುವ ವಲಯ ಕ್ರಾಂತಿಕಾರಿಯಾಗಿಯೇ ಬೆಳೆ ಯುತ್ತಿದೆ. ದೇಶದಲ್ಲಿ ಆ್ಯಪ್ ಅಭಿವೃದ್ಧಿದಾರರು ಮೂರು ಲಕ್ಷದಷ್ಟು ಇದ್ದಾರೆ. ಈ ಕ್ಷೇತ್ರದಲ್ಲಿ ಇಡೀ ವಿಶ್ವದಲ್ಲಿ ಅಮೆರಿಕದ ಬಳಿಕ ಭಾರತ 2ನೇ ಸ್ಥಾನ ದಲ್ಲಿದೆ. 2017ರ ವೇಳೆಗೆ ಭಾರತವು ಸ್ಮಾರ್ಟ್ ಫೋನ್ ತಂತ್ರಾಂಶ ಅಭಿವೃದ್ಧಿಯಲ್ಲಿ ಅಗ್ರಸ್ಥಾನಕ್ಕೆ ಏರುವ ನಿರೀಕ್ಷೆಗಳಿವೆ.
ಯುವಶಕ್ತಿಯೇ ಕೇಂದ್ರ…
ಇಷ್ಟೊಂದು ಆ್ಯಪ್‌ಗಳನ್ನು ಯಾರು ಬಳಸುತ್ತಾರೆ ಅಂತೀರಾ? ಬಳಕೆಯಲ್ಲಿ ಯುವಶಕ್ತಿಯದ್ದೇ ಸಿಂಹಪಾಲು. ಆ್ಯಪ್‌ಗಳ ಒಟ್ಟು ಬಳಕೆದಾರರ ಪೈಕಿ ಅರ್ಧಕ್ಕಿಂತಲೂ ಹೆಚ್ಚಿನವರ ವಯಸ್ಸು 18–24. ಶೇಕಡ 29 ರಷ್ಟು ಬಳಕೆ ದಾರರ ವಯಸ್ಸು 25–45 ವರ್ಷ. ಜತೆಗೆ ಆ್ಯಪ್ ಗಳ ಒಟ್ಟು ಬಳಕೆದಾರರ ಪೈಕಿ ಶೇ 45ರಷ್ಟು ಜನರು ದೇಶದ ನಾಲ್ಕೇ ನಾಲ್ಕು ಮಹಾನಗರ ಗಳಲ್ಲಿ ವಾಸಿಸುತ್ತಾರಂತೆ.
ಭಾರತೀಯರು ನಿತ್ಯ ಸರಾಸರಿ 3 ಗಂಟೆ 18 ನಿಮಿಷಗಳ ಕಾಲ ಸ್ಮಾರ್ಟ್‌ಫೋನ್‌ಗಳ ಮೇಲೆ ಸಮಯ ವಿನಿಯೋಗಿಸುತ್ತಾರೆ. ಅದರಲ್ಲಿ ಮೂರನೇ ಒಂದರಷ್ಟು ಸಮಯ ಆ್ಯಪ್‌ಗಳ ಬಳಕೆಗೆ ಉಪಯೋಗಿಸುತ್ತಾರಂತೆ.
ಇನ್ನು, ಪೇಯ್ಡ್ ವಿಭಾಗದ ಆ್ಯಪ್‌ಗಳಲ್ಲಿ ಗೇಮ್ಸ್ ತುಂಬಾ ಜನಪ್ರಿಯ. ನಂತರದ ಸ್ಥಾನ ಇನ್‌ಸ್ಟಂಟ್ ಮೆಸೇಜಿಂಗ್ ಹಾಗೂ ಮ್ಯೂಸಿಕ್ ಆ್ಯಪ್‌ಗಳದ್ದು ಎನ್ನುವ ಅಧ್ಯಯನ ವರದಿ, ಆಧುನಿಕತೆ ಹೆಗ್ಗುರಾಗುತ್ತಿರುವ ಸಾಮಾಜಿಕ ಜಾಲ ತಾಣಗಳು, ನ್ಯೂಸ್, ಫೋಟೊ, ಗೇಮ್ಸ್ ಹಾಗೂ ವೀಡಿಯೊ ಜನಪ್ರಿಯ ಉಚಿತ ಆ್ಯಪ್‌ಗಳ ಪಟ್ಟಿಯ ಲ್ಲಿವೆ ಎಂದು ನಿರೂಪಿಸಿದೆ.
ಉಚಿತ ಅಪ್ಲಿಕೇಷನ್ಸ್
ಉಚಿತ ಎಂಬ ಪದವನ್ನು ಕಂಡು–ಕೇಳಿದೊಡನೆ ಕಣ್ಣರಳುವುದು, ಕಿವಿ ನಿಮಿರುವುದು ಸಹಜ! ಸ್ಮಾರ್ಟ್‌ಫೋನ್ ವಿಷಯದಲ್ಲೂ ಇದು ಸತ್ಯ. ನಿತ್ಯ ಸಾಕಷ್ಟು ಹೊಸ ಉಚಿತ ಆ್ಯಪ್‌ಗಳು ಮಾರುಕಟ್ಟೆಗೆ ಬರುತ್ತಲೇ ಇವೆ.
ಆದರೆ, ಅವು ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಶಕ್ತಿಯನ್ನು ತಿಗಣೆಯಂತೆ ಹೀರಬಲ್ಲವು ಎಂದು ಭಾರತ ಮೂಲದ ಅಮೆರಿಕನ್ ಮೇಯಪ್ಪನ್ ನಾಗಪ್ಪನ್ ಅವರು ಸಹ ಲೇಖಕರಾಗಿರುವ ಸಂಶೋಧನಾ ವರದಿ ಎಚ್ಚರಿಸಿದೆ.
‘ಉಚಿತ ಆ್ಯಪ್‌ಗಳು ಬ್ಯಾಟರಿ ಉಂಡು ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆಯನ್ನೇ ತಗ್ಗಿಸುವುದರ ಜತೆಗೆ ಹೆಚ್ಚಿನ ಡೇಟಾ ವನ್ನೂ ಬಳಸಿಕೊಳ್ಳುತ್ತವೆ’ ಎನ್ನುತ್ತಾರೆ ಅಧ್ಯಯನದ ಸಹ ಲೇಖಕ ವಿಲಿಯಮ್ ಹಾಲ್ಫೋಂಡ್.
ಜಾಹೀರಾತುಗಳಿಲ್ಲದ ಆ್ಯಪ್‌ಗಳ ಬಳಕೆಗೆ ಹೋಲಿಸಿದರೆ ಜಾಹೀರಾತು ಇರುವ ಆ್ಯಪ್‌ಗಳು, ಸರಾಸರಿ ಶೇ 16ರಷ್ಟು ಹೆಚ್ಚಿನ ಶಕ್ತಿಯನ್ನು ಹೀರುತ್ತವೆ. ಇದರಿಂದ ಬ್ಯಾಟರಿ ಸಾಮರ್ಥ್ಯ ಸರಾಸರಿ 2.5ರಿಂದ 2.1 ಗಂಟೆಗೆ ಕುಸಿಯುತ್ತದೆ. ಜತೆಗೆ ಸುಮಾರು ಶೇ 79ರಷ್ಟು ಹೆಚ್ಚಿನ ಡೇಟಾ ಕೂಡ ಬಳಕೆಯಾಗುತ್ತದೆ ಎಂಬುದು ಸದರ್ನ್ ಕ್ಯಾಲಿಫೋರ್ನಿಯ ಯೂನಿವರ್ಸಿಟಿ, ರೋಷೆಸ್ಟರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಕೆನಡಾದ ಕ್ವೀನ್ಸ್ ಯೂನಿರ್ವಸಿಟಿಯ ಹಲವು ಸಂಶೋಧಕರ ತಂಡ ಒಟ್ಟಾಗಿ ನಡೆಸಿದ ಅಧ್ಯಯನದ ಸಾರ.
ಮೊಬೈಲ್ ಫೋನ್‌ನ ಸಿಪಿಯು ಅದರ ಮೆದುಳಿದ್ದಂತೆ. ಜಾಹೀರಾತು ಅದರ ಬಹುತೇಕ ಶಕ್ತಿಯನ್ನು ತಿಂದುಹಾಕಿ ಅದನ್ನು ನಿಧಾನವನ್ನಾಗಿಸುತ್ತದೆ. ‘ಜಾಹೀರಾತುಗಳಿರುವಂಥ ಆ್ಯಪ್‌ಗಳು ಸಿಪಿಯುವಿನ ಸರಾಸರಿ 48ರಷ್ಟು ಹೆಚ್ಚಿನ ಸಮಯವನ್ನು, ಶೇ 22ರಷ್ಟು ಹೆಚ್ಚಿನ ಮೆಮೊರಿ ಹಾಗೂ ಶೇ 56ರಷ್ಟು ಅಧಿಕ ಸಿಪಿಯು ಉಪಯುಕ್ತತೆತೆಯನ್ನು ಬಳಸಿಕೊಳ್ಳುತ್ತವೆ’ ಎಂದು ವಿವರಿಸಿದ್ದಾರೆ ಮೇಯಪ್ಪನ್ ನಾಗಪ್ಪನ್.