ಪಪುವಾನ್ಯೂಗಿನಿ, ಮೇ 5-ಈಶಾನ್ಯ ಭಾಗದ ಕೊಕೊಪು ಪಟ್ಟಣದ ದಕ್ಷಿಣಕ್ಕೆ 140 ಕಿ.ಮೀ. ದೂರದಲ್ಲಿ 7.5ರಷ್ಟು ತೀವ್ರತೆಯ ಭೂಕಂಪನ ಇಂದು ಮುಂಜಾನೆ ಸಂಭವಿಸಿದ ಪರಿಣಾಮ ಇಲ್ಲಿನ ಜನತೆ ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಲ್ಲಿ ಎರಡನೇ ಬಾರಿ ಪ್ರಬಲ ಭೂಕಂಪನ ಸಂಭವಿಸಿದ ಹಿನ್ನೆಲೆಯಲ್ಲಿ ಭೀಕರ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಅಮೆರಿಕಾದ ಹವಾಮಾನ ಇಲಾಖೆ ಎಚ್ಚರಿಸಿದೆ. ಇಂದು ಮುಂಜಾನೆ ಸಂಭವಿಸಿದ ಈ ಭೂಕಂಪನಕ್ಕೆ ಯಾವುದೇ ರೀತಿಯ ಹಾನಿ ಉಂಟಾದ ಬಗ್ಗೆ
ಈವರೆಗೆ ವರದಿಗಳಾಗಿಲ್ಲವಾದರೂ ಫೆಸಿಪಿಕ್ ಮಹಾಸಾಗರದ ಗರ್ಭದಲ್ಲಿ ಸುನಾಮಿ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇಲ್ಲಿಗೆ 10 ಕಿ.ಮೀ. ಭೂ ತಳದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ ಎಂದು ತಿಳಿಸಿರುವ ಅಮೆರಿಕಾ ಭೂ ಗರ್ಭಶಾಸ್ತ್ರಜ್ಞರು ತಿಳಿಸಿದ್ದು, ಮಹಾಸಾಗರದ 300 ಕಿ.ಮೀ. ವ್ಯಾಪ್ತಿಯಲ್ಲಿ ಸುನಾಮಿ ಅಪ್ಪಳಿಸಬಹುದೆಂದು ಸೂಚಿಸಲಾಗಿದೆ.
ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಕಳೆದ ಮೂರು ದಿನಗಳ ಹಿಂದೆಯೂ ಇಲ್ಲಿ ಭೂಕಂಪನ ಉಂಟಾಗಿದ್ದು, ತೀವ್ರತೆ ಕಡಿಮೆ ಇದ್ದ ಪರಿಣಾಮ ಯಾವುದೇ ರೀತಿಯ ಸುನಾಮಿ ಭೀತಿ ಇರಲಿಲ್ಲ. ಇಂದಿನ ಭೂಕಂಪನದ ತೀವ್ರತೆ 7.5ರಷ್ಟು ಇದ್ದುದರಿಂದ ಸುನಾಮಿ ಭೀತಿ ಸಹಜವಾಗಿಯೇ ಮೂಡಿದ್ದು, ಸಾಮಾನ್ಯವಾಗಿ ಇಲ್ಲಿ ಭೂಕಂಪನ ಉಂಟಾದರೆ ಮಹಾಸಾಗರದಲ್ಲಿ ಸುನಾಮಿ ಏಳುವುದು ಸಾಮಾನ್ಯ ವಿಷಯ. ಶನಿವಾರ 4.6ರಷ್ಟು ತೀವ್ರತೆಯ ಭೂಕಂಪನ ಇಲ್ಲಿ ಉಂಟಾಗಿದ್ದರೆ, ನಿನ್ನೆ 5.6ರಷ್ಟು ತೀವ್ರತೆಯ ಕಂಪನ ಕಂಡುಬಂದಿದ್ದು, ಇನ್ನೂ ಇಲ್ಲಿ ಭೂಕಂಪನದ ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
– ಈ ಸಂಜೆ