ಲಂಡನ್: ಪರೀಕ್ಷೆಯಲ್ಲಿ ಮಕ್ಕಳು ಹೆಚ್ಚಿನ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಬೇಕಾದರೆ ಸ್ಮಾರ್ಟ್‌ಫೋನ್ ಅವರ ಕೈಗೆ ಸಿಗದಂತೆ ಲಾಕರ್‌ನಲ್ಲಿ ಭದ್ರವಾಗಿಡಿ ಎಂದಿದೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ನಡೆದ ಹೊಸ ಅಧ್ಯಯನ.
ಮಕ್ಕಳ ಜತೆ ಸಂಪರ್ಕದಲ್ಲಿರಲು ಸ್ಮಾರ್ಟ್‌ಫೋನ್ ಬೇಕು ಎಂಬುದು ಪೋಷಕರ ವಾದವಾದರೆ, ಸ್ಮಾರ್ಟ್‌ಫೋನ್ ಏಕಾಗ್ರತೆಗೆ ಭಂಗ ತರುವುದು ಎಂದು ಶಿಕ್ಷಕರು ದೂರುತ್ತಾರೆ. ಈಗಾಗಲೇ ಹಲವು ಶಾಲೆಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆ ನಿಷೇಧಿಸಲಾಗಿದೆ.
ಅಧ್ಯಯನದ ವೇಳೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ರಿಚರ್ಡ್ ಮರ್ಫಿ ಹಾಗೂ ಲೂಯಿಸ್-ಫಿಲಿಪ್ ಬಿಲ್ಯಾಂಡ್, 91 ಬ್ರಿಟಿಷ್ ಶಾಲೆಗಳ 13,000 ವಿದ್ಯಾರ್ಥಿಗಳ ಪರೀಕ್ಷೆ ಅಂಕಗಳನ್ನು ಪರಿಶೀಲಿಸಿದ್ದಾರೆ. ಸೆಲ್‌ಫೋನ್ ಬಳಕೆ ವಿಚಾರದಲ್ಲಿ ಈ ಎಲ್ಲ ಶಾಲೆಗಳ ನಿಯಮಗಳು ಬೇರೆ ಬೇರೆ ಆಗಿದ್ದವು.
‘ಶಾಲೆಗಳಲ್ಲಿ ಫೋನ್ ಬಳಕೆ ನಿಷೇಧ, ವಾರದಲ್ಲಿ ಹೆಚ್ಚುವರಿ ಒಂದು ತಾಸು ಅಧ್ಯಯನಕ್ಕೆ ಸಮ. ಫೋನ್ ನಿಷೇಧಿಸಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶೇ.6.4ರಷ್ಟು ಹೆಚ್ಚು ಅಂಕ ಗಳಿಸಿದ್ದಾರೆ. ಓದಿನಲ್ಲಿ ಹಿಂದುಳಿದ ಮಕ್ಕಳು ಸಹ ಫೋನ್ ನಿಷೇಧದ ನಂತರ ಶೇ.14ರಷ್ಟು ಹೆಚ್ಚು ಅಂಕ ಗಳಿಸಲು ಸಾಧ್ಯವಾಗಿರುವ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ ,’ ಎಂದು ಸಂಶೋಧಕರು ಹೇಳಿದ್ದಾರೆ.
‘ಮೊಬೈಲ್ ಫೋನ್ ಬಳಸುವ ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸಲಾಗದ ಪರಿಣಾಮ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ. ಎಲ್ಲ ಶಾಲೆಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಿದರೆ, ತರಗತಿಯಲ್ಲಿ ಮಕ್ಕಳು ಗಮನವಿಟ್ಟು ಪಾಠ ಕೇಳುತ್ತಾರೆ. ಕಲಿಕೆ ಸುಧಾರಿಸುತ್ತದೆ. ಹಾಗಾಗಿ, ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ನೀಡಬೇಡಿ,’ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.