ಸಿಯಾಟಲ್, ಮೇ 21: ವಾಶಿಂಗ್ಟನ್ ರಾಜ್ಯದ ಕರಾವಳಿ ಬಂಡೆಗಳ ನಡುವೆ ಉತ್ಖನನ ನಡೆಸುತ್ತಿರುವ ವಿಜ್ಞಾನಿಗಳು ಎರಡು ಕಾಲಿನ ಮಾಂಸಾಹಾರಿ ಡೈನಸಾರ್‌ನ ಎಡ ತೊಡೆಯ ಮೂಳೆಯೊಂದನ್ನು ಪತ್ತೆಹಚ್ಚಿದ್ದಾರೆ. ಈ ಪಳೆಯುಳಿಕೆ ಸುಮಾರು ಎಂಟು ಕೋಟಿ ವರ್ಷಗಳಷ್ಟು ಹಳೆಯದು ಹಾಗೂ ರಾಜ್ಯದಲ್ಲಿ ಪತ್ತೆಯಾಗಿರುವ ಈ ಮಾದರಿಯ ಮೊದಲನೆ ಪಳೆಯುಳಿಕೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
2012ರ ಮೇ ತಿಂಗಳಲ್ಲಿ ಸಿಯಾಟಲ್‌ನ ವಾಯುವ್ಯದಲ್ಲಿರುವ ಸ್ಯಾನ್ ಜುವಾನ್ ದ್ವೀಪ ಸಮೂಹದಲ್ಲಿರುವ ಸೂಸಿಯಾ ದ್ವೀಪದ ದಂಡೆಯಲ್ಲಿ ಈಗ ನಾಶಗೊಂಡಿರುವ ಮೃದ್ವಂಗಿ ಆ್ಯಮನೈಟ್‌ನ ಪಳೆಯುಳಿಕೆಗಳಿಗಾಗಿ ಶೋಧ ನಡೆಸುತ್ತಿದ್ದ ವಿಜ್ಞಾನಿಗಳಿಗೆ 16.7 ಇಂಚು ಉದ್ದದ ತೊಡೆ ಮೂಳೆಯ ಪಳೆಯುಳಿಕೆ ಕಾಣಿಸಿತು ಎಂದು ಬರ್ಕ್ ಮ್ಯೂಸಿಯಂ ಆ್ ನ್ಯಾಚುರಲ್ ಹಿಸ್ಟರಿ ಆ್ಯಂಡ್ ಕಲ್ಚರ್ ಹೇಳಿದೆ.
ಈ ಡೈನಸಾರ್‌ನ ನಿಖರ ಪ್ರಭೇದವನ್ನು ಗುರುತಿಸಲು ವಿಜ್ಞಾನಿಗಳು ವಿಲರಾದರು. ಆದರೆ, ಅದು ತಿಯರಾಪಾಡ್ (ಎರಡು ಬಲವಾದ ಹಿಂಗಾಲುಗಳು ಮತ್ತು ಕೈಗಳನ್ನು ಹೊಂದಿರುವ ಡೈನಸಾರ್) ವರ್ಗಕ್ಕೆ ಸೇರಿದ್ದು ಎಂಬುದನ್ನು ಅವರು ಗುರುತಿಸಿದರು. ಡೈನಸಾರ್ ಸಮುದ್ರದ ಸಮೀಪ ಸತ್ತಿರಬೇಕು, ಅಲೆಗಳು ಅದನ್ನು ಸಮುದ್ರದ ಒಳಕ್ಕೆ ಒಯ್ದಿರಬೇಕು ಎಂದು ಊಹಿಸಲಾಗಿದೆ.
ಬಂಡೆಗೆ ಅಂಟಿಕೊಂಡಿದ್ದ ಪಳೆಯುಳಿಕೆಯನ್ನು ತೆಗೆದು, ಗುರುತಿಸಿ, ವಿಶ್ಲೇಷಿಸಲು ಮೂರು ವರ್ಷಗಳು ಬೇಕಾಯಿತು ಎಂದು ಮ್ಯೂಸಿಯಂ ವಕ್ತಾರೆ ಆ್ಯಂಡ್ರಿಯಾ ಗೋಡಿನೇಝ್ ತಿಳಿಸಿದರು.