ಇಸಿಸ್ ಉಗ್ರರ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಶುಕ್ರವಾರದ ಪ್ರಾರ್ಥನೆ ವೇಳೆ ಶಿಯಾ ಮಸೀದಿಯ ಮೇಲೆ ಆತ್ಮಾಹುತಿ ದಾಳಿ ನಡೆಸುವ ಮೂಲಕ ತಮ್ಮ ಪೈಶಾಚಿಕತೆ ಪ್ರದರ್ಶಿಸಿದ ಘಟನೆ ಕುವೈತ್ ನಲ್ಲಿ ನಡೆದಿದೆ.
ಸುಮಾರು 20 ಸಾವಿರ ಮಂದಿ ಇಲ್ಲಿನ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸಲು ಕುಳಿತಿದ್ದ ಸಮಯದಲ್ಲಿ ಈ ಆತ್ಮಾಹುತಿ ದಾಳಿ ನಡೆದಿದೆ ಎನ್ನಲಾಗಿದ್ದು ಭೀಕರ ಸ್ಫೋಟಕ್ಕೆ ಮಸೀದಿಯ ಗೋಡೆ ಹಾಗೂ ಚಾವಣಿ ಹಾನಿಗೊಳಗಾಗಿದ್ದು 13ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸೌಬರ್ ಜಿಲ್ಲೆಯ ಇಮಾಮ್ ಅಲ್ ಸದಾಖ್ ಮಸೀದಿಯನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದ್ದು ಈ ಘಟನೆಯಿಂದ ಸುಮಾರು 25 ಮಂದಿ ಗಾಯಗೊಂಡಿದ್ದಾರೆ.ಇಸಿಸ್ ಉಗ್ರ ಸಂಘಟನೆಗೆ ಸೇರಿದ 30 ವರ್ಷದ ಯುವಕನೊಬ್ಬ ತನ್ನನ್ನು ತಾನೇ ಸ್ಪೋಟಿಸಿಕೊಂಡು ಈ ಘಟನೆಗೆ ಕಾರಣನಾಗಿದ್ದಾನೆ ಎನ್ನಲಾಗುತ್ತಿದ್ದು ತನಿಖೆಯ ನಂತರವಷ್ಟೇ ಇನ್ನಷ್ಟು ಮಾಹಿತಿಗಳು ಹೊರಬರಬೇಕಿದೆ.
ಉಗ್ರರ ಅಟ್ಟಹಾಸಕ್ಕೆ ಬೆಚ್ಚಿ ಬಿದ್ದ ಫ್ರಾನ್ಸ್
ಫ್ರಾನ್ಸ್ನಲ್ಲಿ ಶುಕ್ರವಾರ ಉಗ್ರಗಾಮಿಗಳು ಕಾರ್ಖಾನೆ ಒಂದರಲ್ಲಿ ಸ್ಪೋಟಕ ಸಾಧನಗಳೊಂದಿಗೆ ದಾಳಿ ನಡೆಸಿರುವ ಜತೆಗೆ ವ್ಯಕ್ತಿಯೊಬ್ಬನ ತಲೆ ಕಡಿದು ಇಸ್ಲಾಮಿ ಧ್ವಜ ಪ್ರದರ್ಶಿಸಿದ ಆಘಾತಕಾರಿ ಘಟನೆ ನಡೆದಿದೆ.
ಪೂರ್ವ ಫ್ರಾನ್ಸ್ನಲ್ಲಿ ಏಕಾಏಕಿ ದಾಳಿ ನಡೆಸಿದ ಮುಸ್ಲೀಂ ಉಗ್ರರು ಇಲ್ಲಿನ ಕಾರ್ಖಾನೆಯನ್ನು ಪ್ರವೇಶಿಸಿ ಹಲವಾರು ಸ್ಪೋಟಕ ಸಾಧನಗಳನ್ನು ಇಟ್ಟು ಸ್ಪೋಟಿಸಿದ ಎನ್ನಲಾಗಿದ್ದು, ಫ್ಯಾಕ್ಟರಿಯ ಸಮೀಪದಲ್ಲಿ ಶಿರಚ್ಛೇದಕ್ಕೆ ಒಳಗಾಗಿದ್ದ ಒಬ್ಬ ವ್ಯಕ್ತಿಯ ಶವ ಕಂಡುಬಂದಿದ್ದು ತುಂಡರಿಸಲಾದ ಶಿರ ನಾಪತ್ತೆಯಾಗಿದ್ದು ಸ್ಥಳದಲ್ಲಿ ಅರಬ್ಬಿ ಬರಹವಿದ್ದ ಧ್ವಜ ಲಭಿಸಿದೆ.
ಸ್ಥಳೀಯ ಕಾಲಮಾನ 10 ಗಂಟೆಗೆ ಈ ದಾಳಿ ನಡೆದಿದೆ ಎನ್ನಲಾಗಿದ್ದು ಘಟನೆಗೆ ಸಂಬಂಧಿಸಿ ಒಬ್ಬನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಇಲ್ಲಿಯವರೆಗೂ ಯಾವುದೇ ಉಗ್ರ ಸಂಘಟನೆ ದುಷ್ಕೃತ್ಯದ ಹೊಣೆ ಹೊತ್ತಿಲ್ಲ.