ಬೀಜಿಂಗ್: ಜಲವಿದ್ಯುತ್ ಉತ್ಪಾದನೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಚೀನಾ ವಿಶ್ವದ ಅತಿ ಎತ್ತರದ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದು, 2022ರ ವೇಳೆಗೆ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ. ಚೀನಾದ ಯಾಂಗ್ಟೆಜ್ ಮಹಾನದಿಯ ಉಪನದಿಗೆ ಅಡ್ಡಲಾಗಿ ತಲೆ ಎತ್ತಲಿರುವ ‘ಶುವಾಂಜಿಯಾನ್‌ಕೋ’ ಹೆಸರಿನ 314 ಮೀಟರ್ (1,030 ಅಡಿ) ಎತ್ತರದ ಡ್ಯಾಂ ವಿಶ್ವದಲ್ಲೇ ಅತಿ ಎತ್ತರದ ಅಣೆಕಟ್ಟೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಪ್ರಸ್ತುತ ಚೀನಾದಲ್ಲೇ ಇರುವ ‘ಜಿನ್‌ಪಿಂಗ್-1’ ಡ್ಯಾಂ ವಿಶ್ವದ ಅತಿ ಎತ್ತರದ ಅಣೆಕಟ್ಟು (305 ಮೀಟರ್) ಎಂಬ ಹಿರಿಮೆಯನ್ನು ಹೊಂದಿದ್ದು, ಈ ದಾಖಲೆಯನ್ನು ಸ್ವತಃ ಚೀನಾ ಮುರಿಯಲು ಮುಂದಾಗಿರುವುದು ವಿಶೇಷ. ಬರೋಬ್ಬರಿ 5.8 ಶತಕೋಟಿ ಡಾಲರ್ ಖರ್ಚಿನಲ್ಲಿ ಈ ಹೊಸ ಅಣೆಕಟ್ಟು ನಿರ್ಮಾಣ ಮಾಡುತ್ತಿದೆ. ಈಗಾಗಲೇ ವಿಶ್ವದಲ್ಲೆ ಅತಿ ದೊಡ್ಡ ಅಣೆಕಟ್ಟು ಸೇರಿದಂತೆ ಚೀನಾ 85,000ಕ್ಕೂ ಹೆಚ್ಚು ಜಲವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿದೆ.
ಪರಿಸರ ತಜ್ಞರ ವಿರೋಧ: ಆದರೆ ಚೀನಾದಲ್ಲಿ ಹೆಚ್ಚುತ್ತಿರುವ ಅಣೆಕಟ್ಟುಗಳ ನಿರ್ಮಾಣದಿಂದ ಅರಣ್ಯ ನಾಶ ಹೆಚ್ಚುತ್ತಿದ್ದು, ಪರಿಸರ ಅಸಮತೋಲನ ಉಂಟಾಗುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಬಲವಂತದ ಸ್ಥಳಾಂತರ: ಚೀನಾದಲ್ಲಿ ಕಳೆದ ಒಂದು ದಶಕದಲ್ಲಿ ಡ್ಯಾಂಗಳ ನಿರ್ಮಾಣ ಕಾರ್ಯ ತೀವ್ರಗೊಂಡಿದ್ದು, ಲಕ್ಷಾಂತರ ಜನರು ನೆಲೆ ಕಳೆದುಕೊಳ್ಳುತ್ತಿದ್ದಾರೆ. ಸರಕಾರ ಬಿಡಿಗಾಸಿನ ಪರಿಹಾರ ಕೊಟ್ಟು ಜನರನ್ನು ಬಲವಂತವಾಗಿ ಸ್ಥಳಾಂತರ ಮಾಡುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.