ಕೌಲಾಲಂಪುರ: ಹಿಂದೂ ಮಹಾಸಾಗರದ ರಿಯೂನಿಯನ್ ದ್ವೀಪದಲ್ಲಿ ಪತ್ತೆಯಾಗಿದ್ದ ವಿಮಾನದ ಭಗ್ನಾವಶೇಷವು ಕಳೆದ ವರ್ಷ ಮಾರ್ಚ್‌ನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಎಂಎಚ್ 370 ಬೋಯಿಂಗ್ 777 ವಿಮಾನದ್ದೇ ಎಂದು ಖಚಿತವಾಗಿದೆ.
ಹಿಂದೂ ಮಹಾಸಾಗರದಲ್ಲಿ ಈಗಾಗಲೇ ಸಿಕ್ಕಿರುವ ವಿಮಾನದ ರೆಕ್ಕೆಯ ಅವಶೇಷವು ಆರು ಅಡಿ ಉದ್ದವಿದೆ. ಅದರ ಮೇಲೆ 657 ಬಿಬಿ ಎಂಬ ಬಿಡಿಭಾಗ ಗುರುತನ್ನು ನಮೂದಿಸಲಾಗಿದೆ. ಅವಶೇಷದ ಬಿಡಿಭಾಗದ ಮೇಲಿದ್ದ ಸಂಖ್ಯೆಯು ಅದು 370 ಬೋಯಿಂಗ್ 777 ವಿಮಾನದ್ದೇ ಎನ್ನುವುದನ್ನು ಖಚಿತಪಡಿಸಿದೆ. ಈ ಬೆಳವಣಿಗೆಯಿಂದ ಆ ವಿಮಾನ ದುರಂತದ ರಹಸ್ಯ ಬೆಳಕಿಗೆ ಬರಬಹುದು. ಮಲೇಷ್ಯಾ ಏರ್‌ಲೈನ್ಸ್ ನೀಡಿರುವ ಮಾಹಿತಿ ಪ್ರಕಾರ, ಅಲ್ಲಿ ಸಿಕ್ಕಿರುವ ಅವಶೇಷ 370 ಬೋಯಿಂಗ್ 777 ವಿಮಾನದ್ದೆನ್ನುವುದು ಖಚಿತವಾಗಿದೆ ಎಂದು ಮಲೇಷ್ಯಾದ ಉಪ ಸಾರಿಗೆ ಸಚಿವ ಅಬ್ದಲ್ ಅಜೀಜ್ ಕಪ್ರಾವಿ ಹೇಳಿದ್ದಾರೆ.
16 ತಿಂಗಳ ಹಿಂದೆ 239 ಮಂದಿಯನ್ನೊಳಗೊಂಡ ಮಲೇಷ್ಯಾದ ಎಂಎಚ್370 ವಿಮಾನ ಅಪಹರಣವಾಗಿರಬಹುದೆಂಬ ಶಂಕೆ ಆರಂಭದಲ್ಲಿತ್ತು. ಆದರೆ ಬಳಿಕ ಯಾವುದೇ ಸುಳಿವು ಸಿಗದ ಕಾರಣ ನಿಗೂಢತೆ ಇನ್ನೂ ಹೆಚ್ಚಾಗಿತ್ತು. ಸುಮಾರು ಒಂದೂವರೆ ವರ್ಷದಿಂದ ಆ ವಿಮಾನದಲ್ಲಿ ನಾಪತ್ತೆಯಾದವರ ಕುಟುಂಬದವರು ತಮ್ಮವರಿಗಾಗಿ ಕಾಯುತ್ತಿದ್ದಾರೆ.
ಏನಾಗಿತ್ತು?
ಮಲೇಷ್ಯಾ ಏರ್‌ಲೈನ್ಸ್‌ಗೆ ಸೇರಿದ್ದ ಎಂಎಚ್370 ಬೋಯಿಂಗ್ 777 ವಿಮಾನ ಕೌಲಾಲಂಪುರದಿಂದ ಚೀನಾದ ಬೀಜಿಂಗ್‍ಗೆ ತೆರಳುತ್ತಿದ್ದಾಗ ಮಾರ್ಚ್ 8ರಂದು ಮಾರ್ಗ ಮಧ್ಯೆ ಸಂಪರ್ಕ ಕಳೆದುಕೊಂಡಿತ್ತು. ಆಗ ವಿಮಾನದಲ್ಲಿ ಸಿಬ್ಬಂದಿ ಸೇರಿ 239 ಜನರಿದ್ದರು. ದಿಢೀರ್ ನಾಪತ್ತೆಯಾದ ವಿಮಾನ ಪತ್ತೆ ಹಚ್ಚಲು ಅಮೆರಿಕ, ಆಸ್ಟ್ರೇಲಿಯಾ, ಚೀನಾ ಸೇರಿ 25ಕ್ಕೂ ಹೆಚ್ಚು ದೇಶಗಳು ಶ್ರಮಿಸಿದ್ದವು. ಭಾರತ ಕೂಡ ಬಹು ದೊಡ್ಡ, ದೀರ್ಘ ಶೋಧ ಕಾರ್ಯದಲ್ಲಿ ಅಹೋರಾತ್ರಿ ಶ್ರಮಿಸಿತ್ತು. ವಿಮಾನದ ಅವಶೇಷ ಪತ್ತೆಗಾಗಿ ಮಲೇಷ್ಯಾ ಸೇರಿದಂತೆ ಹತ್ತಾರು ದೇಶಗಳು ವಿಮಾನ, ನೌಕೆ, ಸಬ್‌ಮೆರಿನ್, ಮೀನುಗಾರಿಕಾ ದೋಣಿಗಳು ಸೇರಿದಂತೆ ಉಪಗ್ರಹದ ನೆರವನ್ನೂ ಪಡೆದಿದ್ದವು. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಈ ವಿಮಾನ ಪತ್ತೆ ಕಾರ್ಯಕ್ಕೆ ಸುಮಾರು ಮಲೇಷ್ಯಾ 800 ಕೋಟಿ ರೂ. ಖರ್ಚು ಮಾಡಿತ್ತು. ಅಮೆರಿಕ 152 ಕೋಟಿ ರೂ. ವೆಚ್ಚ ಮಾಡಿತ್ತು. ಉಳಿದ ದೇಶಗಳೂ ಕೋಟ್ಯಂತರ ರೂ. ಖರ್ಚು ಮಾಡಿದ್ದವು. ಮಾರ್ಚ್ 24ರಂದು ಪತ್ತೆ ಕಾರ್ಯವನ್ನು ನಿರಾಸೆಯ ಸ್ಥಿತಿಯಲ್ಲಿ ಅಂತ್ಯಗೊಳಿಸಲಾಗಿತ್ತು.