ಲಂಡನ್: ಖಾಸಗಿ ವಿಮಾನವೊಂದು ಟೇಕ್ ಆಫ್ ಆದ ತುಸು ಹೊತ್ತಿನಲ್ಲಿಯೇ ದಕ್ಷಿಣ ಇಂಗ್ಲೆಂಡ್‌ನಲ್ಲಿ ಅಪಘಾತಕ್ಕೀಡಾಗಿದ್ದು, ಪಯಣಿಸುತ್ತಿದ್ದ ನಾಲ್ವರೂ ಮೃತಪಟ್ಟಿದ್ದಾರೆ. ‘ಮೃತರು ಆಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಬಂಧುಗಳು,’ ಎಂದು ಸೌದಿ ಹಾಗೂ ಬ್ರಿಟಿಷ್ ಮಾಧ್ಯಮಗಳ ವರದಿ ಹೇಳುತ್ತಿವೆ.
‘ಸೌದಿ ಅರೇಬಿಯಾದಲ್ಲಿ ನೋಂದಣಿಯಾದ ವಿಮಾನದಲ್ಲಿ ಪೈಲಟ್ ಸೇರಿ ನಾಲ್ವರು ಪಯಣಿಸುತ್ತಿದ್ದು, ಯಾರೂ ಬದುಕುಳಿದಿಲ್ಲ,’ ಎಂದು ಬ್ರಿಟಿಷ್ ಪೊಲೀಸರು ಖಚಿತಪಡಿಸಿದರೂ, ಮೃತರ ಗುರುತನ್ನು ಬಹಿರಂಗಗೊಳಿಸಲು ನಿರಾಕರಿಸಿದ್ದಾರೆ.
ಬ್ರಿಟನ್‌ನಲ್ಲಿ ಸೌದಿ ಅರೇಬಿಯಾ ರಾಯಭಾರಿಯಾಗಿರುವ ಪ್ರಿನ್ಸ್ ಮೊಹ್ಮದ್ ಬಿನ್ ನವಾಫ್ ಅಲ್ ಸೌದ್ ತಮ್ಮ ಅಧಿಕೃತ ಟ್ವೀಟ್ ಖಾತೆಯಲ್ಲಿ, ಸೌದಿ ಅರೇಬಿಯಾದೊಂದಿಗೆ ವ್ಯವಹಾರ ಆಸಕ್ತಿ ಹೊಂದಿರುವ ಬಿನ್ ಲಾಡೆನ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ‘ಬಲ್ಕ್‌ಬುಷೆ ನಿಮಾನ ನಿಲ್ದಾಣದಿಂದ ಬಿನ್ ಲಾಡೆನ್ ಕುಟುಂಬದ ಸದಸ್ಯರನ್ನು ಕರೆದೊಯ್ಯುತ್ತಿದ್ದ ವಿಮಾನವೊಂದು ದುರಂತಕ್ಕೀಡಾಗಿದೆ. ಮೃತರಾದ ಲಾಡೆನ್ ಬಂಧುಗಳಿಗೆ ಶ್ರದ್ಧಾಂಜಲಿ ಸಲ್ಲಿಸುವೆ,’ ಎಂದು ಹೇಳಿದ್ದಾರೆ.
ಮೃತರಲ್ಲಿ ಲಾಡೆನ್ ಮಲತಾಯಿ ಹಾಗೂ ಸಹೋದರಿಯೂ ಇದ್ದರು, ಎಂದು ಸೌದಿ ಮಾಧ್ಯಮಗಳು ಹೇಳಿವೆ.
ದುರಂತದ ಬಗ್ಗೆ ತನಿಖೆ ನಡೆಸಲು ಹಾಗೂ ದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ಸಂಬಂಧ ಬ್ರಿಟಿಷ್ ಸರಕಾರದೊಂದಿಗೆ ಕಾರ್ಯನಿರ್ವಹಿಸುತ್ತಿರುವುದಾಗಿ, ಸೌದಿ ರಾಯಭಾರ ಕಚೇರಿ ತಿಳಿಸಿದೆ.
ದುರಂತಕ್ಕೆ ಕಾರಣವೇನೆಂದು ಪತ್ತೆ ಹಚ್ಚಲು ತನಿಖೆ ಕೈಗೊಳ್ಳಲಾಗಿದೆ, ಎಂದು ಹ್ಯಾಂಪ್‌ಶೈರ್ ಪೊಲೀಸರು ತಿಳಿಸಿದ್ದಾರೆ.