70 ಮೊಸಳೆಗಳ ತಲೆಗಳನ್ನು ಕಡಿದು ಅವುಗಳನ್ನು ಫ್ರೀಜರ್ ನಲ್ಲಿ ಕೊಳೆಯಲು ಹಾಕಿದ್ದ ಘಟನೆಯೊಂದು ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಡಾರ್ವಿನ್ ನಗರದಿಂದ 40 ಕಿಮೀ ದೂರದಲ್ಲಿರುವ ಹಮ್ಟಿ ಡೂ ಎಂಬ ಸಣ್ಣ ಪಟ್ಟಣದ ಪ್ರಾದೇಶಿಕ ಅಂಗಡಿಯ ಹತ್ತಿರ ಈ ಫ್ರೀಜರ್ ಪತ್ತೆಯಾಗಿದ್ದು ಆಟವಾಡಲೆಂದು ಹೋಗಿದ್ದ ಮಕ್ಕಳು ಇದನ್ನು ಗಮನಿಸಿ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದು ತಕ್ಷಣ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸುಮಾರು70 ಮೊಸಳೆಗಳ ತಲೆಗಳನ್ನು ಫ್ರೀಜರ್ ಒಳಗೆ ತುರುಕಿ ಕೊಳೆಯಲು ಹಾಕಿರುವ ವಿಷಯ ಬಯಲಿಗೆ ಬಂದಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೊಸಳೆಯ ಚರ್ಮಕ್ಕೆ ಭಾರೀ ಬೆಲೆಯಿದ್ದು ಇದೇ ಕಾರಣಕ್ಕೆ ಈ ಮೊಸಳೆಯನ್ನು ಕಳ್ಳ ಸಾಗಣೆ ದಾರರು ಹತ್ಯೆ ಮಾಡಿರಬಹುದು ಎಂಬ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಆಸ್ಟ್ರೇಲಿಯಾದಲ್ಲಿ ಮೊಸಳೆಗಳನ್ನು ಸಂರಕ್ಷಿತ ಜೀವವಲಯದಲ್ಲಿ ಗುರುತಿಸಲಾಗಿದ್ದು ಬೇಟೆಯಾಡಿದವರಿಗೆ 55,779 ಡಾಲರ್ ದಂಡ ಅಥವಾ ಐದು ವರ್ಷದ ಜೈಲುಶಿಕ್ಷೆ ನೀಡಲಾಗುತ್ತಿದ್ದು ಅನಿವಾರ್ಯದ ಪರಿಸ್ಥಿತಿಯಲ್ಲಿ ಮಾತ್ರ ಮೊಸಳೆಗಳ ಬೇಟೆಗೆ ಪರವಾನಿಗೆ ನೀಡಲಾಗುತ್ತದೆ. ಈಗಾಗಲೇ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಮೊಸಳೆಯನ್ನು ಹತ್ಯೆ ಮಾಡಿದ ವ್ಯಕ್ತಿಗಳ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.