ಲಂಡನ್: ಚಂದ್ರನ ಮೇಲ್ಮೈ ಮೇಲೆ ನಡೆದಾಡಿದ ಎರಡನೇ ವ್ಯಕ್ತಿ ಎಂದು ಇತಿಹಾಸದಲ್ಲಿ ದಾಖಲಾಗಿರುವ ಅಪೊಲೊ 11ರ ಗಗನಯಾತ್ರಿ ಬಝ್ ಆಲ್ಡ್ರಿನ್ 1969ರಲ್ಲಿ ಪಡೆದ ಪ್ರಯಾಣ ವೆಚ್ಚ ಕೇವಲ 33 ಡಾಲರ್ ಮಾತ್ರ.
ಅವರು ಹೂಸ್ಟನ್‌ನಿಂದ ಚಂದ್ರನ ಮೇಲೆ, ಅಲ್ಲಿಂದ ಮರಳಿ ತವರಿಗೆ ಬರಲು ಪಡೆದ ಪ್ರಯಾಣ ವೆಚ್ಚವನ್ನು ನಿಖರವಾದ ಅಂಕಿ ಅಂಶಗಳಲ್ಲಿ ಹೇಳಬೇಕೆಂದರೆ 33.31 ಡಾಲರ್‌ಗಳು ಎನ್ನುತ್ತದೆ ಬಝ್ ಆಲ್ಡ್ರಿನ್ ಅವರ ಅಧಿಕೃತ ಟ್ವಿಟರ್ ಪೋಸ್ಟ್.
1969ರಲ್ಲಿ ಚಂದ್ರನಲ್ಲಿಗೆ ಮಾಡಿದ ಪಯಣಕ್ಕಾಗಿ ಸರಕಾರದಿಂದ ಪಡೆದ ಪ್ರಯಾಣ ಚೀಟಿ ಹಾಗೂ ತನ್ನ ಕಸ್ಟಮ್ಸ್ ಅರ್ಜಿಯ ಪ್ರತಿಗಳನ್ನು ಅವರು ಟ್ವೀಟ್ ಮಾಡಿದ್ದರಿಂದ ಈ ಮಹತ್ವದ ಸಂಗತಿ ಬಯಲಾಗಿದೆ. 85 ವರ್ಷದ ಬಝ್ ಆಲ್ಡ್ರಿನ್ ಈ ದಾಖಲೆಗಳನ್ನು ಇಂದಿಗೂ ಜೋಪಾನವಾಗಿಟ್ಟುಕೊಂಡಿದ್ದಾರೆ.
ಬಾಹ್ಯಾಕಾಶಕ್ಕೆ ಪಯಣ ಹೊರಟಿದ್ದ ಆಲ್ಡ್ರಿನ್, ಹೂಸ್ಟನ್, ಟೆಕ್ಸಾಸ್‌ನಿಂದ ಚಂದ್ರನ ಮೇಲೆ ಹಾಗೂ ಅದೇ ದಾರಿಯಲ್ಲಿ ವಾಪಸ್ ಆದ ಪ್ರಯಾಣಕ್ಕಾಗಿ ಪಡೆದ ವೆಚ್ಚ ಕೇವಲ 33.31 ಡಾಲರ್‌ಗಳಷ್ಟೇ ಎಂದು ದಿ ಗಾರ್ಡಿಯನ್ ವರದಿ ತಿಳಿಸಿದೆ.
ಸರಕಾರದ ಬಾಹ್ಯಾಕಾಶ ನೌಕೆಯಲ್ಲಿ ಪಯಣಿಸಿದ ಆಲ್ಡ್ರಿನ್ ಅವರ ಪ್ರಯಾಣ ಚೀಟಿಯಲ್ಲಿ ಯಾವುದ್ಯಾವುದಕ್ಕೆ ಎಷ್ಟೆಷ್ಟು ಖರ್ಚು ಎಂಬ ನಿಖರವಾದ ಮಾಹಿತಿಗಳನ್ನು ನಮೂದಿಸಲಾಗಿದೆ. ಅದರಲ್ಲಿ ಅವರು ಬಳಸಿದ ವಿಮಾನ ಪ್ರಯಾಣ ವೆಚ್ಚ, ಪ್ರಯಾಣದ ವ್ಯವಸ್ಥೆಯ ಪ್ರತಿ ವಿವರಗಳಿವೆ. ಅದರಲ್ಲಿರುವ ದಿನಾಂಕದಲ್ಲಿ ಸರಕಾರದ ವತಿಯಿಂದ ಒದಗಿಸಿದ ಊಟ, ವಸತಿಯ ವಿವರಗಳೂ ದಾಖಲಾಗಿವೆ. ಅವರು ಚಂದ್ರನಲ್ಲಿಗೆ ಪಯಣ ಹೊರಡುವ ಸಂಬಂಧ ನಾನಾ ವಿಮಾನ ನಿಲ್ದಾಣಗಳ ನಡುವೆ ಸಂಚರಿಸಿದ ಕಾರು ಬಾಡಿಗೆಯೂ ಅದರಲ್ಲಿ ಸೇರಿದೆ ಎನ್ನಲಾಗಿದೆ.