ಲಂಡನ್: ಲಂಡನ್ ಮೂಲದ 69 ವರ್ಷದ ಮಹಿಳೆ ರಜೆ ಪ್ರವಾಸಕ್ಕೆಂದು ಕೆರಿಬಿಯನ್ ರಾಷ್ಟ್ರಕ್ಕೆ ತೆರಳಿದ್ದಾಗ ಅಲ್ಲಿ ಸೊಳ್ಳೆ ಕಡಿತದಿಂದ ಚಿಕುನ್ ಗುನ್ಯಾಗೆ ತುತ್ತಾಗಿ ಕಣ್ಣನ್ನೇ ಕಳೆದುಕೊಂಡಿದ್ಧಾಳೆ.
ಸೊಳ್ಳೆ ಹರಡಿದ ವೈರಸ್ ನಿಂದಾಗಿಯೇ ಈ ಮಹಿಳೆ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾಳೆಂದು ವೈದ್ಯರು ಧೃಡಪಡಿಸಿದ್ಧಾರೆ. ಚಿಕುನ್ ಗುನ್ಯಾಗೆ ತುತ್ತಾದವರು ಜೀವನ ಪರ್ಯಂತ ಕೆಲ ಸಮಸ್ಯೆಗಳಿಗೆ ತುತ್ತಾಗುತ್ತಾರೆ, ಇದರಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ ಅಂತಾರೆ ವೈದ್ಯರು.
2014ರಲ್ಲಿ ಕೆರಿಬಿಯನ್ ದ್ವೀಪ ಗ್ರೆನಡಾಗೆ ತೆರಳಿದ್ದ ಮಹಿಳೆಗೆ ಸೊಳ್ಳೆ ಕಡಿದಿವೆ. ಬಳಿಕ ಆಕೆಗೆ ಜ್ವರ, ಮಂಡಿ, ಮಣಿಕಟ್ಟುಗಳ ನೋವು, ಸುಸ್ತು ಕಾಡಲಾರಂಭಿಸಿದೆ. ಇದಾದ ಸ್ವಲ್ಪ ದಿನಗಳ ಬಳಿಕ ಬಲಗಣ್ಣಿನಲ್ಲಿ ದೃಷ್ಟಿದೋಶ ಕಾಣಿಸಿಕೊಂಡಿದೆ.
ಆಗಸ್ಟ್ ನಲ್ಲಿ ಸ್ವದೇಶಕ್ಕೆ ಹಿಂದಿರುಗಿದ ಆಕೆಗೆ ಕಣ್ಣಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಸ್ವದೇಶಕ್ಕೆ ಬಂದ 3 ವಾರಗಳ ಬಳಿಕ ಕಣ್ಣಿನ ಸಮಸ್ಯೆಯಿಂದ ವೈದ್ಯರನ್ನ ಭೇಟಿಯಾದಾಗ ಚಿಕುನ್ ಗುನ್ಯಾ ಬಂದಿರುವುದು ತಿಳಿದುಬಂದಿದೆ. ಮಹಿಳೆಯ ಕಣ್ಣಿನ ದೃಷ್ಟಿಯನ್ನ ಮರುಸ್ಥಾಪಿಸಲು ವೈದ್ಯರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ, ಕಣ್ಣಿನ ನರದ ಅರ್ಧಭಾಗ ಸಂಪೂರ್ಣ ಹಾಳಾಗಿದ್ದು, ವೈದ್ಯರ ಪ್ರಯತ್ನ ಫಲ ನೀಡಿಲ್ಲ.