ಗೂಗಲ್ ತನ್ನ ಒಡೆತನದ ಹಲವು ಸಂಸ್ಥೆಗಳ ಸ್ವರೂಪವನ್ನು ಪುನರಚಿಸಿದ್ದು, ‘ಆಲ್ಫಬೆಟ್’ ಎಂಬ ಮಾತೃ ಸಂಸ್ಥೆಯನ್ನು ಹುಟ್ಟಿಹಾಕಿ ಅದರ ಕೆಳಗೆ ಉಳಿದ ಸಂಸ್ಥೆಗಳು ಬರಲಿವೆ ಎಂದು ತನ್ನ ಅಧಿಕೃತ ಬ್ಲಾಗಿನಲ್ಲಿ ಹೇಳಿಕೊಂಡಿದೆ.
‘ಆಲ್ಫಬೆಟ್’ ಈಗ ಗೂಗಲ್ ಒಡೆತನದ ಹಲವಾರು ಸಂಸ್ಥೆಗಳ ಒಟ್ಟು ಸಮೂಹ. ಅದರಲ್ಲಿ ಗೂಗಲ್ ಸಂಸ್ಥೆಯೇ ಪ್ರಧಾನವಾದದ್ದು. ಗೂಗಲ್ ಸಹ ಸಂಸ್ಥಾಪಕ ಲ್ಯಾರಿ ಪೇಜ್ ಅವರು ಬ್ಲಾಗಿನಲ್ಲಿ ತಿಳಿಸಿರುವ ಹಾಗೆ, ಗೂಗಲ್ ಸಂಸ್ಥೆಯನ್ನು ಸ್ವಲ್ಪ ತೆಳುವು ಮಾಡಲಾಗಿದ್ದು ಅಂತರ್ಜಾಲಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಗೂಗಲ್ ನೋಡಿಕೊಳ್ಳಲಿದ್ದು ಉಳಿದವನ್ನು ‘ಆಲ್ಫಬೆಟ್’ ಸಂಸ್ಥೆಯ ಕೆಳಗೆ ಬರುವಂತೆ ನೋಡಿಕೊಳ್ಳಲಾಗಿದೆ.
ಗೂಗಲ್ ಸಂಸ್ಥೆ ಅಂತರ್ಜಾಲ ಸೇವಗಳಾದ ಗೂಗಲ್ ಭೂಪಟ, ಯುಟ್ಯೂಬ್, ಕ್ರೋಮ್, ಆಂಡ್ರಾಯ್ಡ್ ಮುಂತಾದ ಸೇವಗಳನ್ನು ಮುಂದುವರೆಸುತ್ತದೆ.. ಆದರೆ ಎಕ್ಸ್ ಲ್ಯಾಬ್, ಕ್ಲ್ಯಾಲಿಕೋ ಲೈಫ್ ಮುಂತಾದ ಯೋಜನೆಗಳು ವಿಭಿನ್ನ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸಲಿವೆ ಎನ್ನಲಾಗಿದೆ.
ಸದ್ಯಕ್ಕೆ ಲ್ಯಾರಿ ಪೇಜ್ ‘ಆಲ್ಫಬೆಟ್’ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಕೆಲಸ ನಿರ್ವಹಿಸಲಿದ್ದು, ಮತ್ತೊಬ್ಬ ಸಹ ಸಂಸ್ಥಾಪಕ ಸೇರ್ಜಿ ಬಿನ್ ಸಂಸ್ಥೆಯ ಅಧ್ಯಕ್ಷರಾಗಲಿದ್ದಾರೆ. ಹಾಗೆಯೆ ಗೂಗಲ್ ಸಂಸ್ಥೆಯ ದೀರ್ಘ ಕಾಲದ ಸಹಚರ ಭಾರತೀಯ ಸುಂದರ್ ಪಿಚ್ಚೈ ಅವರು ಗೂಗಲ್ ನ ಮುಖ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡೋದ್ದಾರೆ.