ನ್ಯೂಯಾರ್ಕ್: ಸಿಲಿಕಾನ್ ವ್ಯಾಲಿಯ ದಿಗ್ಗಜರಾದ ಫೇಸ್‌ಬುಕ್, ಗೂಗಲ್, ಮೈಕ್ರೋಸಾಫ್ಟ್, ಯಾಹೂ ಮತ್ತು ಟ್ವೀಟರ್ ಜತೆಯಾಗಿ ಬ್ರಿಟನ್‌ನ ಇಂಟರ್ನೆಟ್ ವಾಚ್ ಫೌಂಡೇಷನ್ ( ಐಡಬ್ಲ್ಯೂಎಫ್)ನೊಂದಿಗೆ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹುಡುಕಿ, ಬ್ಲಾಕ್ ಮಾಡುವ ಕಾರ್ಯಕ್ಕೆ ಮುಂದಾಗಿವೆ.
ದತ್ತಿ ಸಂಸ್ಥೆಯಾದ ಐಡಬ್ಲ್ಯೂಎಫ್ ಅಶ್ಲೀಲ ಚಿತ್ರಗಳನ್ನು ಪತ್ತೆ ಹಚ್ಚಿ, ಡಿಜಿಟಲ್ ಫಿಂಗರ್ ಪ್ರಿಂಟ್‌ನಂತೆ ಕಾರ್ಯನಿರ್ವಹಿಸಿ, ವಿಶೇಷ ಕೋಡ್‌ನೊಂದಿಗೆ ಹ್ಯಾಷ್‌ನೊಂದಿಗೆ ಕಾಣುವಂತೆ ಮಾಡುವ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದಿದೆ.
ಚಿತ್ರವೊಂದಕ್ಕೆ ಹ್ಯಾಷ್ ಹಾಕಿದರೆ, ಅದು ವಿಶೇಷವಾಗಿ ಗೋಚರಿಸಲಿದ್ದು, ಆ ನಿರ್ದಿಷ್ಟ ಚಿತ್ರ ಹುಡುಕಲು ಸುಲಭವಾಗಲಿದೆ.
ಹ್ಯಾಷ್ ಹಾಕಿರುವ ಚಿತ್ರಗಳನ್ನು ಈಗಾಗಲೇ ದಾಖಲಿಸಿರುವ ಐಡಬ್ಲ್ಯೂಎಫ್, ಅವನ್ನು ಇದುವರೆಗೆ ಐದು ಕಂಪನಿಗಳೊಂದಿಗೆ ಮಾತ್ರ ಹಂಚಿಕೊಂಡಿತ್ತು. ಆದರೆ, ಇತರೆ ಕಂಪನಿಗಳೊಂದಿಗೂ ಹಂಚಿ ಕೊಳ್ಳಲು ಇದೀಗ ಮುಂದಾಗಿದೆ.
ಒಮ್ಮೆ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಲ್ಲಿ, ಫೇಸ್‌ಬುಕ್, ಟ್ವೀಟರ್ ಅಥವಾ ಬೇರೆ ಜಾಲತಾಣಗಳಲ್ಲಿ ಇಂಥ ಚಿತ್ರಗಳನ್ನು ಸ್ಕ್ಯಾನ್ ಮಾಡುವುದು ಸುಲಭ. ಅಪ್‌ಲೋಡ್ ಆಗುತ್ತಿರುವ ಚಿತ್ರ ಈಗಾಗಲೇ ಐಡಬ್ಲ್ಯೂಎಫ್‌ನಿಂದ ಟ್ಯಾಗ್ ಆಗಿದ್ದರೆ, ಅಪ್‌ಲೋಡ್ ಆಗದಂತೆ ಎಚ್ಚರವಹಿಸುತ್ತದೆ.
ಈಗಾಗಲೇ ಗೂಗಲ್ ಮಕ್ಕಳ ಅಶ್ಲೀಲ ಚಿತ್ರ ನಿಷೇಧಕ್ಕೆ ಮುಂದಾಗಿದ್ದು, ಇದೀಗ ಇತರೆ ಕಂಪನಿಗಳೊಂದಿಗೂ ಕೈ ಜೋಡಿಸಿದ್ದರಿಂದ ಈ ಕಾರ್ಯ ಯಶಸ್ವಯಾಗಲಿದೆ.