ಟೈಪೆ: 12 ವರ್ಷದ ಹುಡುಗನೊಬ್ಬ ಮಾಡಿದ ಸಣ್ಣ ಯಡವಟ್ಟಿನಿಂದಾಗಿ ಸುಮಾರು 1.5 ಮಿಲಿಯನ್ ಡಾಲರ್ ಬೆಲೆ ಬಾಳುವ ಅಮೂಲ್ಯ ಕಲಾಕೃತಿಯೊಂದು ಹಾಳಾಗುವಂತಾಗಿದೆ.
ತೈವಾನ್ ರಾಜಧಾನಿ ಟೈಪೆಯಲ್ಲಿ ಏರ್ಪಡಿಸಲಾಗಿದ್ದ ಅಮೂಲ್ಯ ಕಲಾಕೃತಿಗಳ ಪ್ರದರ್ಶನಕ್ಕೆ ತನ್ನ ಪೋಷಕರೊಂದಿಗೆ ಆಗಮಿಸಿದ್ದ 12 ವರ್ಷದ ಈ ಬಾಲಕ ಎತ್ತಲೋ ನೋಡುತ್ತಾ ಕಲಾಕೃತಿ ಪಕ್ಕಕ್ಕೆ ಬಂದ ವೇಳೆ ಆಯತಪ್ಪಿದ್ದು, ಕೆಳಗೆ ಬೀಳಬಾರದೆಂಬ ಧಾವಂತದಲ್ಲಿ ಕಲಾಕೃತಿಯನ್ನು ಹಿಡಿದುಕೊಂಡಿದ್ದಾನೆ. ಇದರ ಪರಿಣಾಮ ಅದಕ್ಕೆ ಹಾನಿಯುಂಟಾಗಿದೆ ಎಂದು ಹೇಳಲಾಗಿದ್ದು, ಈ ಕಲಾಕೃತಿಯ ಮೌಲ್ಯ 1.5 ಮಿಲಿಯನ್ ಡಾಲರ್ ಗಳೆಂದು ಹೇಳಲಾಗಿದೆ.
ಈ ಬಾಲಕ ಕಲಾಕೃತಿಯಲ್ಲಿ ತಾನು ಉಂಟು ಮಾಡಿದ ಹಾನಿಯನ್ನೂ ಗಮನಿಸಿದ್ದು, ಬಳಿಕ ಎಲ್ಲರೂ ಮಾಡುವಂತೆ ಅತ್ತ ಇತ್ತ ನೋಡಿ ಗುಂಪಿನಲ್ಲಿ ಸೇರಿಕೊಂಡಿದ್ದಾನೆ. ಈ ಪ್ರದರ್ಶನ ಏರ್ಪಡಿಸಿದವರು ಇದರ ವಿಡಿಯೋ ಬಿಡುಗಡೆ ಮಾಡಿದ ಬಳಿಕವೇ ಈ ಅಚಾತುರ್ಯ ಬೆಳಕಿಗೆ ಬಂದಿದೆ. ಅದಾಗ್ಯೂ ಈ ಘಟನೆ ಆಕಸ್ಮಿವಾಗಿ ನಡೆದಿರುವ ಕಾರಣ ಬಾಲಕನ ಪೋಷಕರಿಂದ ದಂಡ ವಸೂಲಿ ಮಾಡದಿರಲು ನಿರ್ಧರಿಸಲಾಗಿದೆ. ಈ ಹುಡುಗನ ಯಡವಟ್ಟಿನ ವಿಡಿಯೋವನ್ನು ಇದೇ ಪುಟದ ಕೆಳ ಭಾಗದಲ್ಲಿರುವ ‘ಕನ್ನಡ ದುನಿಯಾ’ ದ ವಿಡಿಯೋ ವಿಭಾಗದಲ್ಲಿ ನೋಡಬಹುದಾಗಿದೆ.