ಲಂಡನ್: ಯಾರಾದರೂ ಒಂದೆರಡು ದಿನ ಸ್ನಾನ ಮಾಡಿಲ್ಲವೆಂದರೆ ವಾಕರಿಸಿಕೊಳ್ಳುವಂತೆ ಆಗುತ್ತದೆ. ಆದರೆ ಇಲ್ಲೊಬ್ಬ ವಿಜ್ಞಾನಿ ಕಳೆದ 12 ವರ್ಷದಿಂದ ಒಮ್ಮೆಯೂ ಸ್ನಾನ ಮಾಡಿಲ್ಲವಂತೆ!
ಅಂದರೆ ಅವರು ಪ್ರಯೋಗಗಳಲ್ಲಿ ಅಷ್ಟೊಂದು ತಲ್ಲೀನರಾಗಿದ್ದಿರಾ? ಅಂಥ ವಿಜ್ಞಾನಿ ಯಾರು? ಅದು ಯಾವ ರೀತಿಯ ಪ್ರಯೋಗ ಎಂಬೆಲ್ಲಾ ಪ್ರಶ್ನೆಗಳು ನಿಮ್ಮನ್ನು ಕಾಡಬಹುದಲ್ಲವೇ? ಅದಕ್ಕೆ ಇಲ್ಲಿದೆ ಉತ್ತರ.
ಕೆಮಿಕಲ್ ಇಂಜಿನಿಯರ್ ಆಗಿರುವ ಪ್ರತಿಷ್ಠಿತ ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿಜ್ಞಾನಿಯಾಗಿರುವ ಡೇವ್ ವಿಟ್ಲಾಕ್ ಎಂಬುದು ವಿಜ್ಞಾನಿಯ ಹೆಸರು. ಇವರು ಮನುಷ್ಯರ ಮೈಮೇಲಿನ ಕೊಳೆಯನ್ನು ಕಬಳಿಸಿ, ಚರ್ಮವನ್ನು ಸ್ವಚ್ಛವಾಗಿಸುವ ಬ್ಯಾಕ್ಟೀರಿಯಾಗಳನ್ನು ಮೈಗೆಲ್ಲಾ ಪೂಸಿಕೊಳ್ಳುವ ಮೂಲಕ ಸ್ನಾನ ಮಾಡುವ ಕಷ್ಟದಿಂದ ಪಾರಾಗಿದ್ದಾರಂತೆ! ಈ ಬ್ಯಾಕ್ಟೀರಿಯಾಗಳು ಕೂಡ ಅವರದ್ದೇ ಸಂಶೋಧನೆಯಂತೆ!
ಈ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿರುವ ವಿಟ್ಲಾಕ್, ದಿನಕ್ಕೆ ಎರಡು ಬಾರಿ ಈ ಬ್ಯಾಕ್ಟೀರಿಯಾಗಳನ್ನು ಮೈಗೆಲ್ಲಾ ಪೂಸಿಕೊಳ್ಳುತ್ತೇನೆ. ಇದರಿಂದಾಗಿ ನನಗೆ ಸ್ನಾನ ಮಾಡುವ ಅವಶ್ಯಕತೆಯೇ ಬರುವುದಿಲ್ಲ. ನನ್ನ ದೇಹದ ಮೇಲಿರಬಹುದಾದ ಕಲ್ಮಶವನ್ನು ನಿವಾರಿಸಿಕೊಳ್ಳಲು ಅಪರೂಪಕ್ಕೊಮ್ಮೆ ಸ್ಪಾಂಜ್ ಬಾತ್ ಮಾಡುತ್ತೇನೆ. ಇದರಿಂದ ನನ್ನ ದೇಹ ಸ್ವಚ್ಛವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಜಗತ್ತಿನಾದ್ಯಂತ ಜನರು ಪ್ರತಿದಿನ ಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಆದರೆ ಇದೊಂದು ಒಳ್ಳೆಯ ಅಭ್ಯಾಸ ಎಂಬುದನ್ನು ಯಾವುದೇ ಕ್ಲಿನಿಕಲ್ ಟ್ರಯಲ್ ಮೂಲಕ ಖಚಿಪಡಿಸಲಾಗಿಲ್ಲ. ಹಾಗಾಗಿ ಅದೊಂದು ಒಳ್ಳೆಯ ಅಭ್ಯಾಸವೆಂದು ನಂಬುವುದದರೂ ಹೇಗೆಂಬುದು ಅವರ ಪ್ರಶ್ನೆಯಾಗಿದೆ.
ಬೇಸಿಗೆಯಲ್ಲಿ ಕುದುರೆಗಳು ಏಕೆ ಮಣ್ಣಿನಲ್ಲಿ ಬಿದ್ದು ಹೊರಳಾಡುತ್ತವೆಂದು ತಮ್ಮನ್ನು ಪ್ರಶ್ನಿಸಿದ್ದರು. ಹೀಗೆ ಮಾಡುವುದರಿಂದ ಬಹುಶಃ ಅವುಗಳ ದೇಹಕ್ಕೆ ಏನೋ ಲಾಭ ಇರಬೇಕೆಂದು ಉತ್ತರಿಸಿದ್ದೆ. ಆಕೆಗೆ ಕೊಟ್ಟ ಈ ಉತ್ತರವೇ ಸ್ನಾನ ಮಾಡದಿದ್ದರೂ ದೇಹವನ್ನು ಸ್ವಚ್ಛಗೊಳಿಸಬಹುದಾದ ಬ್ಯಾಕ್ಟೀರಿಯಾಗಳ ಸಂಶೋಧನೆಗೆ ಸ್ಪೂರ್ತಿಯಾಗಿದ್ದಾಗಿ ಅವರು ಹೇಳಿಕೊಂಡಿದ್ದಾರೆ.