ವೆಲ್ಲಿಂಗ್ ಟನ್: ಚಿಲಿಯ ಉತ್ತರಕರಾಳಿಯಲ್ಲಿ ಸಂಭವಿಸಿದ ಪ್ರಭಲ ಭೂಕಂಪನದ ಪರಿಣಾಮ ಉಂಟಾದ ಸುನಾಮಿ ಭೀತಿ ಇದೀಗ ನ್ಯೂಜಿಲೆಂಡ್ ದೇಶಕ್ಕೂ ವಿಸ್ತರಿಸಿದ್ದು, ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ನ್ಯೂಜಿಲೆಂಡ್ ನ ಕರಾವಳಿ ತೀರಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಕರಾವಳಿ ತೀರದಲ್ಲಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗುತ್ತಿದೆ. ಮೂಲಗಳ ಪ್ರಕಾರ ತುರ್ತು ಕಾರ್ಯಾಚಾರಣೆ ಕೈಗೊಂಡಿರುವ ನ್ಯೂಜಿಲೆಂಡ್ ಸೈನಿಕರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕರಾವಳಿ ತೀರ ಪ್ರದೇಶದಲ್ಲಿರುವ ಸುಮಾರು 9 ಸಾವಿರದ 600 ಕಿ.ಮೀ ವ್ಯಾಪ್ತಿಯಲ್ಲಿನ ಜನರನ್ನು ಸ್ಥಳಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈಗಾಗಲೇ ನ್ಯೂಜಿಲೆಂಡ್ ಕರಾವಳಿ ತೀರದಲ್ಲಿ ಸುನಾಮಿ ಅಲೆಗಳು ಅಪ್ಪಳಿಸುವ ಭೀತಿ ಆವರಿಸಿದ್ದು, 10 ಅಡಿಗೂ ಎತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇನ್ನು ನ್ಯೂಜಿಲೆಂಡ್ ನ ನಾಗರಿಕ ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಪೂರ್ವ ಕರಾವಳಿ ಪ್ರದೇಶಗಳಲ್ಲಿರುವ ಜನತೆ ಕೂಡಲೇ ಆ ಸ್ಥಳವನ್ನು ಖಾಲಿ ಮಾಡಿ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಸೂಚನೆ ನೀಡಿದೆ. ಇನ್ನು ಹವಾಮಾನ ಇಲಾಖೆ ವರದಿಗಳ ಆಧಾರ ಮೇರೆಗೆ ಶುಕ್ರವಾರ ಮಧ್ಯರಾತ್ರಿ ಸುನಾಮಿ ಅಲೆಗಳು ನ್ಯೂಜಿಲೆಂಡ್ ಕರಾವಳಿ ತೀರ ಪ್ರದೇಶಕ್ಕೆ ಅಪ್ಪಳಿಸಲಿವೆ ಎಂದು ತಿಳಿದುಬಂದಿದೆ.
ಬುಧವಾರ ತಡರಾತ್ರಿ ಚಿಲಿಯ ಉತ್ತರ ಕರಾವಳಿಯಲ್ಲಿ 8.3 ತೀವ್ರತೆಯ ಭಾರಿ ಭೂಕಂನ ಸಂಭವಿಸಿತ್ತು. ಇದಾದ ಬಳಿಕ ಕ್ರಮವಾಗಿ 7.0 ತೀವ್ರತೆ ಮತ್ತು 6.0 ತೀವ್ರತೆಯ ಉತ್ತರಾಘಾತ ಭೂಕಂಪನ ಸಂಭವಿಸಿದ್ದು, ಸುನಾಮಿ ಭೀತಿ ಅವರಿಸಿದೆ.