ಅಂತರಾಷ್ಟ್ರೀಯ

ಐಟಿ ತಂತ್ರಜ್ಞರ ಜಾದುವಿನಿಂದ ಭಾರತಕ್ಕೆ ಹೊಸ ಅಸ್ತಿತ್ವ: ಸಾನ್‌ಜೋಸ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮೋದಿ

Pinterest LinkedIn Tumblr

modhiಸ್ಯಾನ್‌ಜೋಸ್, ಸೆ. 28: ಭಾರತೀಯ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಿಗಳ ಬೆರಳುಗಳು ಕೀಬೋರ್ಡ್‌ಗಳ ಮೇಲೆ ಸೃಷ್ಟಿಸಿರುವ ಮಾಯೆ ಭಾರತಕ್ಕೆ ವಿಶ್ವದಲ್ಲಿ ಹೊಸ ಅಸ್ತಿತ್ವವನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘‘ನಿಮ್ಮ ಬೆರಳುಗಳು ಕೀಬೋರ್ಡ್ ಮತ್ತು ಕಂಪ್ಯೂಟರ್‌ಗಳಲ್ಲಿ ಮಾಯೆಯನ್ನು ಸೃಷ್ಟಿಸಿವೆ ಹಾಗೂ ಇದು ಭಾರತಕ್ಕೆ ಹೊಸದೊಂದು ಅಸ್ತಿತ್ವವನ್ನು ನೀಡಿದೆ. ನಿಮ್ಮ ನೈಪುಣ್ಯ ಮತ್ತು ಬದ್ಧತೆ ಅಮೋಘ’’ ಎಂದು ಇಲ್ಲಿನ ಎಸ್‌ಎಪಿ ಸೆಂಟರ್‌ನಲ್ಲಿ ಕಿಕ್ಕಿರಿದು ಸೇರಿದ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮೋದಿ ಇಂದು ಹೇಳಿದರು.
‘‘ಇಲ್ಲಿ ಕುಳಿತುಕೊಂಡು ನಿಮ್ಮ ನೈಪುಣ್ಯತೆಯ ಮೂಲಕ ಜಗತ್ತಿನಲ್ಲಿ ಬದಲಾವಣೆಯ ಪರ್ವವನ್ನು ನೀವು ಆರಂಭಿಸಿದಿರಿ. ಬದಲಾಗಲು ನಿರಾಕರಿಸುವ ಜನರು ಶೀಘ್ರದಲ್ಲೇ ಅಪ್ರಸ್ತುತರಾಗುತ್ತಾರೆ’’ ಎಂದರು.
‘‘ಅಮೆರಿಕದ ಜನತೆ ಭಾರತೀಯ ಮೂಲದ ಜನರ ಬಗ್ಗೆ ಹೆಮ್ಮೆಪಟ್ಟುಕೊಳ್ಳುವುದು ಅತ್ಯಂತ ದೊಡ್ಡ ಸಂಗತಿಯಾಗಿದೆ’’ ಎಂದು ಪ್ರಧಾನಿ ನುಡಿದರು.
‘‘ಇದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನಾನು ನಿಮಗೆ ನಮಿಸುತ್ತೇನೆ’’ ಎಂದರು.
ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಭಾರತೀಯ ಅಮೆರಿಕನ್ ಸಮುದಾಯದವರನ್ನು ಭೇಟಿಯಾದ ಒಂದು ವರ್ಷದ ಬಳಿಕ ಮತ್ತೆ ಭಾರತೀಯರನ್ನು ಭೇಟಿಯಾಗುತ್ತಿದ್ದೇನೆ ಎಂದು ಮೋದಿ ನುಡಿದರು.

7 ತಿಳುವಳಿಕೆ ಪತ್ರಗಳಿಗೆ ಸಹಿ
ಭಾರತದಲ್ಲಿನ ‘ಸ್ಟಾರ್ಟ್‌ಅಪ್’ಗಳಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುವ ಸಲುವಾಗಿ ಭಾರತ ಮತ್ತು ಅಮೆರಿಕಗಳ ವಿವಿಧ ಸಂಸ್ಥೆಗಳ ನಡುವೆ ಒಟ್ಟು ಏಳು ತಿಳುವಳಿಕೆ ಪತ್ರಗಳಿಗೆ ಸೋಮವಾರ ಸಹಿ ಹಾಕಲಾಯಿತು. ಸಾನ್‌ಜೋಸ್‌ನಲ್ಲಿ ನಡೆದ ಭಾರತ-ಅಮೆರಿಕ ಸ್ಟಾರ್ಟ್‌ಅಪ್ ಕನೆಕ್ಟ್ 2015ರಲ್ಲಿ ತಿಳುವಳಿಕೆ ಪತ್ರಗಳಿಗೆ ಸಹಿ ಹಾಕಲಾಯಿತು.

ಭಾರತ ನಿಮಗಾಗಿ ಕಾಯುತ್ತಿದೆ
ಒಂದು ಕಾಲದ ಪ್ರತಿಭಾ ಪಲಾಯನ (ಬ್ರೇನ್ ಡ್ರೇನ್) ದ ಲಾಭ (ಬ್ರೇನ್ ಗೇನ್)ವನ್ನು ಭಾರತ ಪಡೆಯುವ ಕಾಲ ಸನ್ನಿಹಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸೋಮವಾರ ಸಾನ್ ಜೋಸ್‌ನ ಎಸ್‌ಎಪಿ ಸೆಂಟರ್‌ನಲ್ಲಿ ನೆರೆದ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ಭಾರತ ನಿಮಗಾಗಿ ಕಾಯುತ್ತಿದೆ’’ ಎಂದರು.
ಭಾರತೀಯ ಸಮುದಾಯ ಭಾರತದ ಅಭಿವೃದ್ಧಿಗೆ ದೇಣಿಗೆ ನೀಡಬೇಕಾದ ಅಗತ್ಯವನ್ನು ಪ್ರಧಾನಿ ಪ್ರತಿಪಾದಿಸಿದರು.
‘‘ಪ್ರತಿಭಾ ಪಲಾಯನದ ಬಗ್ಗೆ ಜನರು ತುಂಬಾ ಮಾತನಾಡುತ್ತಿದ್ದರು. ಅವರಲ್ಲಿ ಈ ಬಗ್ಗೆ ದೂರುಗಳ ಮಹಾಪೂರವೇ ಇತ್ತು’’ ಎಂದರು. ‘‘ಈ ಪ್ರತಿಭಾ ಪಲಾಯನವೇ ಭಾರತದ ಲಾಭವಾಗಬಹುದು ಎಂಬ ಬಗ್ಗೆ ಯಾರಾದರೂ ಚಿಂತಿಸಿದ್ದಾರೆಯೇ? ಇಲ್ಲ, ಆದರೆ ಈಗ ಅದು ಸಂಭವಿಸಿದೆ’’ ಎಂದು ಮೋದಿ ಅಭಿಪ್ರಾಯಪಟ್ಟರು. ಪ್ರತಿಭಾ ಪಲಾಯನವನ್ನು ತಾನು ಪ್ರತಿಭಾ ಠೇವಣಿ ಎಂಬುದಾಗಿ ಪರಿಗಣಿಸುತ್ತೇನೆ ಎಂದು ಹೇಳಿದ ಪ್ರಧಾನಿ, ಈಗ ಈ ಠೇವಣಿಯನ್ನು ‘‘ಬಡ್ಡಿ ಸಮೇತ’’ ಭಾರತದ ಪ್ರಯೋಜನಕ್ಕೆ ಬಳಸಲು ಸಕಾಲ ಎಂದು ಅಭಿಪ್ರಾಯಪಟ್ಟರು.

ಹೊಸದಿಲ್ಲಿ ಸಾನ್‌ಫ್ರಾನ್ಸಿಸ್ಕೊ ನಡುವೆ ನೇರ ವಿಮಾನ: ಪ್ರಧಾನಿ ಘೋಷಣೆ

ಹೊಸದಿಲ್ಲಿ ಮತ್ತು ಸಾನ್‌ಫ್ರಾನ್ಸಿಸ್ಕೊ ನಡುವೆ ಈ ವರ್ಷದ ಡಿಸೆಂಬರ್ 2ರಿಂದ ವಾರದಲ್ಲಿ ಮೂರು ದಿನಗಳ ಕಾಲ ನೇರ ವಿಮಾನ ಹಾರಾಟ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಸ್ಯಾನ್‌ಜೋಸ್‌ನ ಎಸ್‌ಎಪಿ ಸೆಂಟರ್‌ನಲ್ಲಿ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ವೇಳೆ ಅವರು ಈ ಘೋಷಣೆ ಮಾಡಿದರು.
ಡಿಸೆಂಬರ್ 2ರಿಂದ ಏರ್ ಇಂಡಿಯಾವು ವಾರದಲ್ಲಿ ಮೂರು ದಿನಗಳ ಕಾಲ ಹೊಸದಿಲ್ಲಿ ಮತ್ತು ಸಾನ್‌ಫ್ರಾನ್ಸಿಸ್ಕೊ ನಡುವೆ ಹಾರಾಟ ನಡೆಸುವುದು ಎಂದರು.
ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಒಂದು ಗಂಟೆ ಕಾಲ ಮಾತನಾಡಿದ ಬಳಿಕ ವಾಪಸ್ ವೇದಿಕೆಗೆ ಬಂದು ಅವರು ಈ ಘೋಷಣೆಯನ್ನು ಮಾಡಿದರು.

Write A Comment