ಲಂಡನ್, ಅ. 15: ಕ್ಯಾನ್ಸರ್‌ಗೆ ಚಿಕಿತ್ಸೆಯೊಂದನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿ ವಿಜ್ಞಾನಿಗಳು ಆಕಸ್ಮಿಕವಾಗಿ ದೈತ್ಯ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಕ್ಯಾನ್ಸರ್‌ಗೆ ಮಲೇರಿಯ ಪ್ರೊಟೀನೊಂದು ಪರಿಣಾಮಕಾರಿ ಅಸ್ತ್ರವಾಗಬಹುದು ಎನ್ನುವುದನ್ನು ಅವರು ಒಮ್ಮೆಲೆ ಪತ್ತೆಹಚ್ಚಿದ್ದಾರೆ.
ಮಲೇರಿಯದಿಂದ ಗರ್ಭಿಣಿಯರನ್ನು ರಕ್ಷಿಸುವುದು ಹೇಗೆಂಬ ಬಗ್ಗೆ ಡೆನ್ಮಾರ್ಕ್‌ನ ಸಂಶೋಧಕರು ಅಧ್ಯಯನ ನಡೆಸುತ್ತಿದ್ದರು. ಮಲೇರಿಯ ರೋಗಾಣುಗಳು ಪ್ಲಾಸೆಂಟದ ಮೇಲೆ ದಾಳಿ ನಡೆಸುವುದರಿಂದ ಗರ್ಭಿಣಿಯರು ಭಾರೀ ಸಮಸ್ಯೆಗೆ ಗುರಿ ಯಾಗುತ್ತಿದ್ದರು. ಆದರೆ, ಅದೇ ವೇಳೆ ಮಲೇರಿಯ ಪ್ರೊಟೀನ್‌ಗಳು ಕ್ಯಾನ್ಸರ್ ವಿರುದ್ಧವೂ ದಾಳಿ ನಡೆಸಬಹುದು ಎಂಬುದನ್ನೂ ಅವರು ಪತ್ತೆಹಚ್ಚಿದರು. ಈ ಅಂಶವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬೃಹತ್ ನೆಗೆತವಾಗಿದೆ.
ಪ್ಲಾಸೆಂಟ ಮತ್ತು ಟ್ಯೂಮರ್ ನಡುವಿನ ಸಾಮ್ಯತೆಗಳನ್ನು ಬಳಸಿಕೊಳ್ಳುವ ವಿಧಾನವೊಂದಕ್ಕಾಗಿ ವಿಜ್ಞಾನಿಗಳು ದೀರ್ಘ ಕಾಲದಿಂದ ಶೋಧದಲ್ಲಿ ತೊಡಗಿದ್ದರು.
‘‘ಪ್ಲಾಸೆಂಟ ಮತ್ತು ಟ್ಯೂಮರ್‌ಗಳ ಬೆಳವಣಿಗೆಗಳ ನಡುವಿನ ಸಾಮ್ಯತೆಗಾಗಿ ವಿಜ್ಞಾನಿಗಳು ದಶಕಗಳಿಂದ ಶೋಧದಲ್ಲಿ ನಿರತರಾಗಿದ್ದರು’’ ಎಂದು ಕೋಪನ್‌ಹೇಗನ್ ವಿಶ್ವವಿದ್ಯಾನಿಲಯದ ಅಲಿ ಸಲಾಂಟಿ ಹೇಳಿದರು.
ಈ ಪ್ರಕ್ರಿಯೆಯನ್ನು ಜೀವಕೋಶಗಳು ಮತ್ತು ಕ್ಯಾನ್ಸರ್ ಹೊಂದಿರುವ ಇಲಿಗಳ ಮೇಲೆ ನಡೆಸಲಾಗಿದೆ. ನೂತನ ಸಂಶೋಧನೆಯ ಪ್ರಯೋಗವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಮಾನವರ ಮೇಲೆ ನಡೆಸಬಹುದಾಗಿದೆ ಎಂಬ ಭರವಸೆಯನ್ನು ವಿಜ್ಞಾನಿಗಳು ಹೊಂದಿದ್ದಾರೆ.