ಕಾಬೂಲ್: ತಾಲಿಬಾನ್ ಜೊತೆ ಷಾಮೀಲಾದ ಪೊಲೀಸ್ ಪೇದೆಯೊಬ್ಬ ರಾಕ್ಷಸನಂತೆ ವರ್ತಿಸಿ, ತನ್ನ 10 ಮಂದಿ ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದ ಘಟನೆ ದಕ್ಷಿಣ ಆಫ್ಘಾನಿಸ್ತಾನದಲ್ಲಿ ಮಂಗಳವಾರ ನಸುಕಿನಲ್ಲಿ ಘಟಿಸಿದೆ.
ಒಂದೇ ವಾರದ ಅವಧಿಯಲ್ಲಿ ಪೊಲೀಸರ ಮೇಲೆ ಒಳಗಿನ ವ್ಯಕ್ತಿಗಳ ಮೂಲಕವೇ ನಡೆದ ದಾಳಿಯ ಎರಡನೇ ಘಟನೆ ಇದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯಾಕಾಂಡದ ಬಳಿಕ ತಾಲೀಬಾನ್ ನಸುಳುಕೋರರು ಮೃತ ಪೊಲೀಸರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕದ್ದು ಪರಾರಿಯಾಗಿದ್ದಾರೆ. ಉರುಝುಗಾನ್ ಪ್ರಾಂತದ ಚಿನಾರ್ಟೊ ಜಿಲ್ಲೆಯ ಪೊಲೀಸ್ ಹೊರಠಾಣೆಯಲ್ಲಿ ಈ ದಾಳಿ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪೊಲೀಸ್ ಪೇದೆ ತಾಲಿಬಾನ್ ಜೊತೆ ಷಾಮೀಲಾಗಿದ್ದ ಎಂಬುದನ್ನು ನಮ್ಮ ತನಿಖೆಗಳು ತಿಳಿಸಿವೆ. ಆತ ಸಹೋದ್ಯೋಗಿಗಳಿಗೆ ಮಾದಕ ದ್ರವ್ಯ ನೀಡಿ ಅವರು ಅಮಲಿನಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾಗ ಅವರನ್ನು ಕೊಂದು ಹಾಕಿದ್ದಾನೆ ಎಂದು ಉರುಝå್ಗಾನ್ ಗವರ್ನರ್ ಅವರ ವಕ್ತಾರ ದೋಸ್ತ್ ಮೊಹಮ್ಮದ್ ನಾಯಬ್ ಹೇಳಿದರು.