ಇಸ್ಲಾಮಾಬಾದ್: ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ದ್ವಿಮುಖ ನೀತಿ ಮತ್ತೊಮ್ಮೆ ಬಹಿರಂಗವಾಗಿದೆ.ಪಠಾಣ್‌ಕೋಟ್ ದಾಳಿಯಲ್ಲಿ ಜೈಶ್ ಇ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ ಪಾತ್ರವಿರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಪ್ರಕರಣದ ತನಿಖೆ ನಡೆಸಿ ಪಾಕ್ ತಂಡ ಹೇಳಿದೆ.
ಪಠಾಣ್‌ಕೋಟ್ ದಾಳಿಯಲ್ಲಿ ಮೌಲಾನಾ ಮಸೂದ್ ಅಝರ್ ಪಾತ್ರವಿದೆ ಮತ್ತು ಆತನೇ ಈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂಬುದನ್ನು ಸಾಬೀತುಪಡಿಸುವ ಪರ್ಯಾಪ್ತ ಸಾಕ್ಷ್ಯಗಳು ತಮಗೆ ಸಿಕ್ಕಿಲ್ಲ ಎಂಬ ವಿಷಯವನ್ನು ಪಾಕ್ ತನಿಖಾ ತಂಡ ಹೊಸದಿಲ್ಲಿಗೆ ತಿಳಿಸಿರುವುದಾಗಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪಠಾಣ್‌ಕೋಟ್ ದಾಳಿಗಾಗಿ ಮೌಲಾನಾ ಅಝರ್ ನನ್ನು ಕಾನೂನು ಪ್ರಕಾರ ಶಿಕ್ಷಿಸುವುದಕ್ಕೆ ಭಾರತ ಒದಗಿಸಿರುವ ಪುರಾವೆಗಳು ಕಾನೂನು ಪ್ರಕಾರ ಸಾಕಾಗುವುದಿಲ್ಲ ಎಂಬ ವಿಷಯವನ್ನು ಪಾಕ್ ತನಿಖಾ ತಂಡ ಕಳೆದ ವಾರವೇ ಭಾರತಕ್ಕೆ ತಿಳಿಸಿತ್ತು ಎಂದು ವರದಿ ಮಾಡಲಾಗಿದೆ.
ಆದರೆ ಪಠಾಣ್‌ಕೋಟ್ ದಾಳಿಯಲ್ಲಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಕೆಳ ಸ್ತರದ ಉಗ್ರರು ಶಾಮೀಲಾಗಿರುವ ಸಾಧ್ಯತೆಯನ್ನು ಪಾಕ್ ತನಿಖಾ ತಂಡ ಅಲ್ಲಗಳೆದಿಲ್ಲ. ಜನವರಿ 2ರಂದು ನಡೆದಿದ್ದ ಪಠಾಣ್‌ಕೋಟ್ ದಾಳಿಯಲ್ಲಿ ಜೆಇಎಂ ನ ಆರು ಉಗ್ರರು ಭಾರತೀಯ ಭದ್ರತಾ ಪಡೆಗೆ ಬಲಿಯಾಗಿದ್ದರು. ಈ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಏಳು ಭಾರತೀಯ ಯೋಧರು ಹುತಾತ್ಮರಾಗಿದ್ದರು.