ಜೆನೀವಾ: ಅತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದಕ್ಷಿಣ ಸುಡಾನ್ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತಾರಕಕ್ಕೇರಿದ್ದು, ವೇತನ ನೀಡಲಾಗದ ಅಲ್ಲಿನ ಸರ್ಕಾರ ಯೋಧರಿಗೆ ಅತ್ಯಾಚಾರ ಮಾಡಲು ಅವಕಾಶ ನೀಡುತ್ತಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ವರದಿ ಮಾಡಿದೆ ಎಂದು ತಿಳಿದುಬಂದಿದೆ.
ವಿಶ್ವಸಂಸ್ಥೆ ವರದಿ ಮಾಡಿರುವ ಪ್ರಕಾರ ಈ ವರೆಗೂ ಕಳೆದ ಒಂದು ವರ್ಷದಲ್ಲಿ 1,300 ಅತ್ಯಾಚಾರವಾಗಿದೆ ಎಂದು ಹೇಳಿದೆ. ಅಲ್ಲದೆ, ಪ್ರಸ್ತುತ ಸುಡಾನ್ ನಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಿನ ಮಕ್ಕಳು ಹಾಗೂ ಅಂಗವಿಕಲರನ್ನು ಪೋಷಿಸಲು ಸಾಧ್ಯವಾಗದೆ ಜೀವಂತವಾಗಿ ಸುಟ್ಟು ಸಮಾಧಿ ಮಾಡುತ್ತಿದ್ದಾರೆಂದು ಎಂದು ತಿಳಿಸಿದೆ.
ಅಲ್ಲಿನ ಸರ್ಕಾರ ಯೋಧರೊಂದಿನ ಒಪ್ಪಂದದಲ್ಲಿ ನಿಮಗೆ ಬೇಕಾದದನ್ನು ಮಾಡಿ, ಏನನ್ನೂ ಬೇಕಾದರು ತೆಗೆದುಕೊಳ್ಳಿ ಎಂದು ಹೇಳಿದ್ದು, ಇದರಿಂದಾಗಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಅಪಹರಣದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ವೇತನದ ಬದಲಾಗಿ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಅಲ್ಲಿನ ಜನರು ತೀವ್ರ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದ್ದು, ಜನರ ಹಸುಗಳು ಹಾಗೂ ಅವರ ಆಸ್ತಿಪಾಸ್ತಿಗಳನ್ನು ಬಲವಂತದಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.
ಸುಡಾನ್ ನಲ್ಲಿನ ಭೀಕರ ಪರಿಸ್ಥಿತಿ ಕುರಿತಂತೆ ಮಾತನಾಡಿರುವ ಮಾನವ ಹಕ್ಕುಗಳ ಸಮಿತಿ ಮುಖ್ಯಸ್ಥೆ ಝೈದ್ ರಾದ್ ಅಲ್ ಹುಸೇನ್ ಅವರು, 2011ರಲ್ಲಿ ಸುಡಾನ್ ನಿಂದ ಸ್ವತಂತ್ರಗೊಂಡ ದಕ್ಷಿಣ ಸುಡಾನ್ ನಲ್ಲಿ ಯುದ್ಧಾಪರಾಧ ತೀವ್ರಗೊಂಡಿದೆ. ಅಲ್ಲಿನ ದೇಶದ ಆಡಳಿತವೇ ಅಪರಾಧಗಳಿಗೆ ಕುಮ್ಮಕ್ಕು ನೀಡುತ್ತಿವೆ. 15 ವರ್ಷ ನನ್ನ ಮಗಳನ್ನು 10 ಜನರಿರುವ ಯೋಧರ ಗುಂಪೊಂದು, ನನ್ನ ಪತಿಯನ್ನು ಕೊಂದು ಮಗಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದರು ಎಂದು ಮಹಿಳೆಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು. ನಡು ರಸ್ತೆಯಲ್ಲಿ ಐವರು ಯೋಧರು ನನ್ನನ್ನು ಬೆತ್ತಲೆ ಮಾಡಿ ನನ್ನ ಮಕ್ಕಳ ಎದುರೇ ಅತ್ಯಾಚಾರ ಮಾಡಿದ್ದರು ಎಂದು ಹೇಳಿದ್ದರು.
ಮತ್ತೊಬ್ಬ ಮಹಿಳೆ, ಮಕ್ಕಳನ್ನು ಅಪಹರಿಸಿ ವೈಶ್ಯಾವಾಟಿಕೆ ಮನೆಗಳಲ್ಲಿ ಬಿಡಲಾಗುತ್ತಿದೆ ಎಂದು ಹೇಳಿದರು. ದಕ್ಷಿಣ ಸುಡಾನ್ ನಲ್ಲಿ ಪ್ರಸ್ತುತ ವಯಸ್ಕ ಹೆಣ್ಣುಮಕ್ಕಳನ್ನು ಗುರಿ ಮಾಡಲಾಗುತ್ತಿದೆ. ತಮ್ಮ ಮಕ್ಕಳನ್ನು ರಕ್ಷಿಸಲು ಮುಂದಾದವರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಆದರೆ, ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಅಲ್ಲಿನ ಸರ್ಕಾರ ನಾವು ಯಾರೊಂದಿಗೂ ಒಪ್ಪಂದವನ್ನು ಮಾಡಿಕೊಂಡಿಲ್ಲ. ಯಾರ ಮೇಲೂ ದೌರ್ಜನ್ಯ ನಡೆಯುತ್ತಿಲ್ಲ ಎಂದು ಹೇಳಿದೆ. ಆದರೆ, ಘಟನೆಯನ್ನು ತನಿಖೆ ನಡೆಸಲಾಗುತ್ತಿದೆ ಎಂದು ಗೊಂದಲ ಹೇಳಿಕೆ ನೀಡುತ್ತಿದೆ.
ಇದೀಗ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ವರದಿ ವಿಶ್ವಸಂಸ್ಥೆಯ ಅಧಿಕಾರಿಗಳ ಬಳಿ ತಲುಪಿದ್ದು, ವರದಿಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಮತ್ತು ಯುದ್ಧಾಪರಾಧ ಪ್ರಕರಣಗಳನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡಬೇಕೆಂದು ಶಿಫಾರಸ್ಸು ಮಾಡಿದೆ. ಸುಡಾನ್ ನಲ್ಲಿ ಭೀಕರ ಪರಿಸ್ಥಿತಿ ಎದುರಾಗಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿಲ್ಲ ಎಂದು ವರದಿಯಲ್ಲಿ ಹೇಳಿದೆ ಎನ್ನಲಾಗಿದೆ.