ಮಂಗಳೂರು, ಸೆ.15: ಸೌದಿ ಅರೇಬಿಯಾದ ಅಲ್‌ಜುಬೈಲ್ ಸಮೀಪ ರವಿವಾರ ಸಂಜೆ ನಡೆದ ರಸ್ತೆ ಅಪಘಾತವೊಂದರಲ್ಲಿ ಮಂಗಳೂರು ಮೂಲದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಜೋಕಟ್ಟೆ ಕಡೆಮನೆಯ ಟಿ.ಕೆ.ಮುಹಮ್ಮದ್-ವಹೀದಾ ದಂಪತಿಯ ಪುತ್ರ ಶಕೀರ್(23) ಹಾಗೂ ಗುರುಪುರ ತಾಳಿಕಡವಿನ ಟಿ. ಮುಹಮ್ಮದ್ ಹನೀಫ್-ಕೈರುನ್ನಿಸಾ ದಂಪತಿಯ ಪುತ್ರ ಶಾರೂಕ್(22) ಮೃತಪಟ್ಟವರಾಗಿದ್ದಾರೆ.
ಸೌದಿ ಅರೇಬಿಯಾದ ಅರೇಬಿಯನ್ ಕ್ಲೌಡ್ಸ್ ಎಂಬ ಕಂಪೆನಿಯಲ್ಲಿ ಉದ್ಯೋಗಿಗಳಾಗಿದ್ದ ಇವರು ರವಿವಾರ ಅಪರಾಹ್ನ 2:30(ಭಾರತೀಯ ಕಾಲಮಾನ ಸಂಜೆ 5)ರ ವೇಳೆಗೆ ಕಂಪೆನಿಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಇವರು ಸಂಚರಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಶಕೀರ್ ಮತ್ತು ಶಾರೂಕ್ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಅಲ್ ಜುಬೈಲ್‌ನಿಂದ ಮಾದನಿ ಎಂಬಲ್ಲಿಗೆ ಕಾರ್ಯನಿಮಿತ್ತ ತೆರಳುತ್ತಿದ್ದಾಗ ರಾಸ್ ಅಲ್ ಖೈರ್ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಈ ಪರಿಸರದಲ್ಲಿ ಜನಸಂಚಾರ ವಿರಳವಾಗಿರುವ ಕಾರಣ ಅಪಘಾತದ ಮಾಹಿತಿ ಉಳಿದವರಿಗೆ ತಿಳಿಯುವಾಗ ಸ್ವಲ್ಪ ವಿಳಂಬವಾಯಿತು ಎನ್ನಲಾಗಿದೆ. ಮೃತದೇಹವನ್ನು ತವರೂರಿಗೆ ತಲುಪಿಸಲು ಸುಮಾರು 21 ದಿನಗಳ ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ಅಲ್ಲೇ ದಫನ ಕಾರ್ಯನಿರ್ವಹಿಸಲು ಬೇಕಾದ ಸಿದ್ಧತೆ ನಡೆಸಲಾಗಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.
ಊರಿಗೆ ಹಿಂದಿರುಗುವ ಸಿದ್ಧತೆಯಲ್ಲಿದ್ದ ಶಕೀರ್
ಜೋಕಟ್ಟೆಯ ಶಕೀರ್ 2 ವರ್ಷಗಳ ಹಿಂದೆ ಅಲ್ ಜುಬೈಲ್‌ಗೆ ತೆರಳಿದ್ದರು. ಇದೀಗ ತಾಯಿ ಅನಾರೋಗ್ಯಕ್ಕೀಡಾಗಿರುವುದರಿಂದ ಶಕೀರ್ ಅಕ್ಟೋಬರ್ 4ರಂದು ತನ್ನ ಸಂಬಂಧಿಕರೊಬ್ಬರೊಂದಿಗೆ ತವರೂರಿಗೆ ಮರಳಿ ಬರುವವರಿದ್ದರು.
ಟಿ.ಕೆ.ಮುಹಮ್ಮದ್-ವಹೀದಾ ದಂಪತಿಯ ಮೂವರು ಪುತ್ರರಲ್ಲಿ ಶಕೀರ್ ಕೊನೆಯವರು. ಒಬ್ಬ ಅಣ್ಣ ಗಲ್ಫ್‌ನಲ್ಲಿದ್ದರೆ, ಮತ್ತೊಬ್ಬ ಊರಲ್ಲೇ ಇದ್ದಾರೆ. ಕೆಲವು ದಿನಗಳ ಹಿಂದೆ ದೇರಳಕಟ್ಟೆಯಲ್ಲಿ ವಾಸವಾಗಿದ್ದ ಈ ಕುಟುಂಬ ಪ್ರಸ್ತುತ ಕುತ್ತಾರ್ ಸಮೀಪ ನೆಲೆಸಿದೆ.
ಕುಟುಂಬದ ಹಿರಿಯ ಪುತ್ರ ಶಾರೂಕ್ ಗುರುಪುರ ತಾಳಿಕಡವು ಎಂಬಲ್ಲಿನ ಟಿ.ಮುಹಮ್ಮದ್ ಹನೀಫ್ ಮತ್ತು ಕೈರುನ್ನಿಸಾ ದಂಪತಿಯ ಮೂವರು ಮಕ್ಕಳ ಪೈಕಿ ಶಾರೂಕ್ ಹಿರಿಯ ಮಗ. ಒಬ್ಬಳು ತಂಗಿ 9ನೆ ತರಗತಿಯಲ್ಲೂ ಮತ್ತೊಬ್ಬ ತಮ್ಮ ಮೂರನೆ ತರಗತಿಯಲ್ಲೂ ಓದುತ್ತಿದ್ದಾರೆ. ಶಾರೂಕ್ 9 ತಿಂಗಳ ಹಿಂದೆ ಊರಿಗೆ ಬಂದು ಹೋಗಿದ್ದರು. ಅಣ್ಣ-ತಂಗಿಯ ಮಕ್ಕಳು: ಶಕೀರ್‌ರ ತಂದೆ ಟಿ.ಕೆ.ಮುಹಮ್ಮದ್ ಮತ್ತು ಶಾರೂಕ್‌ನ ತಾಯಿ ಕೈರುನ್ನಿಸಾ ಸಹೋದರ-ಸಹೋದರಿಯಾಗಿದ್ದಾರೆ.