ಬಂಟ್ವಾಳ: ಪ್ರತಿಯೊಬ್ಬರೂ ತಮ್ಮ ಕಾರ್ಯಕ್ಷೇತ್ರದಲ್ಲಿ ಶಿಸ್ತು, ಬದ್ಧತೆ, ಏಕತೆ ಮತ್ತು ಧನಾತ್ಮಕ ಚಿಂತನೆಯಿಂದ ಕರ್ತವ್ಯ ನಿರ್ವಹಿಸಿದಾಗ ಅಲ್ಲಿ ಮಹತ್ತರ ಯಶಸ್ಸು ಕಾಣಸಿಗುತ್ತದೆ. ಮಾಡುತ್ತಿರುವ ಉದ್ಯೋಗ ಯಾವುದಾಗಿದ್ದರೂ ಸರಿ ಅಲ್ಲಿ ವ್ಯಕ್ತಿ ತಾನು ಮಾಡುತ್ತಿರುವ ಕರ್ತವ್ಯ ನಿರ್ವಹಣೆಯನ್ನು ಆನಂದಿಸಿದಾಗಲೇ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕೆ.ಐ.ಒ.ಸಿ.ಎಲ್‌ನ ವಿಶ್ರಾಂತ ನಿರ್ದೇಶಕ ಎಂ.ಬಿ.ಪಡಿಯಾರ್ ಹೇಳಿದರು.
ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯ ಅಂಗವಾಗಿ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಎಂಜಿನಿಯರ್‍ಸ್ ಡೇ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಇದನ್ನು ಆನಂದಿಸಿ ಕಠಿಣ ಪರಿಶ್ರಮದಿಂದ ಜೀವನದಲ್ಲಿ ಪ್ರಗತಿಯನ್ನು ಸಾಧಿಸಬೇಕು ಎಂದ ಅವರು ನಮ್ಮ ಕೈಗಾರಿಕೆಗಳು ಮತ್ತು ಎಂಜಿನಿಯರ್‌ಗಳು ಜಾಗತಿಕ ಗುಣಮಟ್ಟಕ್ಕೆ ಬೆಳೆಯುವ ಗುರಿ ನಮ್ಮದಾಗಬೇಕು. ಸಾಗಾಟದಲ್ಲಿನ ಸೋರಿಕೆ ಮತ್ತು ಅಪವ್ಯಯದಂತಹ ಸವಾಲುಗಳನ್ನು ಪರಿಹರಿಸಿಕೊಂಡು ಉತ್ಪನ್ನ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಬಗ್ಗೆ ನಾವು ಗಮನ ಹರಿಸಬೇಕು. ನಮ್ಮ ಮುಂದಿರುವ ಆರ್ಥಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆಯಬೇಕು ಎಂದವರು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಎನ್ ಶ್ಯಾನುಭಾಗ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಅಂತಿಮ ಇಲೆಕ್ಟ್ರಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ ವಿದ್ಯಾರ್ಥಿ ಸರ್ವೇಶ್ ಶೆಣೈ ಅವರನ್ನು ಯುವ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾಲೇಜಿನ ಇ.ಇ.ಇ.ಎ ಘಟಕದ ಅಧ್ಯಕ್ಷ ರಘುವೀರ್ ಹೊಸದುರ್ಗ ಸ್ವಾಗತಿಸಿದರು. ಏಮ್ಸ್ ಘಟಕದ ಮಂಜುಕಿರಣ್ ಸರ್.ಎಂ.ವಿ. ಕುರಿತ ಜೀವನ ಚಿತ್ರಣ ನೀಡಿದರು. ಲಲಿತ ಕಲೆ ಮತ್ತು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎನ್.ಸತೀಶ್ ಕುಮಾರ್ , ಉಪಾಧ್ಯಕ್ಷ ನವೀನ್ ಕಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಸೈಪಿಕ್ಸ್ ಘಟಕದ ರಮೇಶ್ ನಾಯಕ್ ಅತಿಥಿಯನ್ನು ಪರಿಚಯಿಸಿದರು. ಸ್ಟಾಫ್ ಕ್ಲಬ್‌ನ ಸತೀಶ್ ಹೆಗ್ಡೆ ವಂದಿಸಿ ಕು. ಅಶ್ವಿನಿ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.