ಮಂಗಳೂರು, ಸೆ.15: ನಗರವನ್ನು ಸೀಮೆ ಎಣ್ಣೆ ಮುಕ್ತ ನಗರವನ್ನಾಗಿಸಲು ಪ್ರತಿ ಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸಲು ಅಕ್ಟೋಬರ್‌ನಲ್ಲಿ ಮಂಗಳೂರು, ಸುರತ್ಕಲ್, ಉಳ್ಳಾಲದಲ್ಲಿ ಗ್ಯಾಸ್ ಸಂಪರ್ಕ ಮೇಳ ನಡೆಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.
ಸೀಮೆಎಣ್ಣೆ ಮುಕ್ತ ನಗರ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ವಿಷಯ ತಿಳಿಸಿದರು. ಅಕ್ಟೋಬರ್ 8, 9 ಹಾಗೂ 18, 19ರಂದು ವಿಶೇಷ ಆಂದೋಲನ ನಡೆಸಿ, ಪಡಿತರ ಸೀಮೆಎಣ್ಣೆ ಪಡೆಯುತ್ತಿರುವವರಿಗೆ ಗ್ಯಾಸ್ ಸಂಪರ್ಕ ನೀಡಲಾಗುವುದು. ಇದಕ್ಕಾಗಿ ಮಂಗಳೂರು ನಗರಪಾಲಿಕೆ ವ್ಯಾಪ್ತಿಯಲ್ಲಿ 4 ಹಾಗೂ ಉಳ್ಳಾಲದಲ್ಲಿ 1 ಕೌಂಟರ್ ತೆರೆಯಲಾಗುವುದು. ಇಲ್ಲಿ ನಗರಪಾಲಿಕೆ, ಗ್ಯಾಸ್ ವಿತರಕರು ಮತ್ತು ಬ್ಯಾಂಕ್ ಪ್ರತಿನಿಧಿಗಳು ಇರಲಿದ್ದು, ಒಂದೇ ಸ್ಥಳದಲ್ಲಿ ಎಲ್ಲ ಅನುಕೂಲ ಕಲ್ಪಿಸಿ, ಗ್ಯಾಸ್ ಸಂಪರ್ಕ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದರು.
ಮೇಳದಲ್ಲಿ ಪಾಲಿಕೆ, ಪುರಸಭೆಯ ಅಧಿಕಾರಿಗಳು, ಬ್ಯಾಂಕ್ ಹಾಗೂ ಗ್ಯಾಸ್ ಕಂಪೆನಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಗ್ಯಾಸ್ ಸಂಪರ್ಕಕ್ಕೆ ಸ್ವಂತ ಮನೆಯುಳ್ಳವರು ತೆರಿಗೆ ಪಾವತಿ ಪತ್ರ, ರೇಶನ್ ಕಾರ್ಡ್, ಬಾಡಿಗೆ ಮನೆಯಲ್ಲಿರುವವರು ಸ್ವಯಂ ಘೋಷಣಾ ಪತ್ರ, ರೇಶನ್ ಕಾರ್ಡ್ ಪ್ರತಿ ನೀಡಬೇಕು. ಮನೆ ನಂಬ್ರ ಹಾಗೂ ರೇಷನ್ ಕಾರ್ಡ್ ಇಲ್ಲದವರಿಗೆ ಯಾವುದೇ ಗುರುತಿನ ಚೀಟಿ ನೀಡಿದರೂ ಗ್ಯಾಸ್ ಸಂಪರ್ಕ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪ್ರಸಕ್ತ 6,524 ಕಾರ್ಡ್‌ದಾರರು ಮಂಗಳೂರು ನಗರ ಮತ್ತು ಉಳ್ಳಾಲ
ವ್ಯಾಪ್ತಿಯಲ್ಲಿ ನ್ಯಾಯಬೆಲೆ ಅಂಗಡಿಗಳಿಂದ ಸೀಮೆಎಣ್ಣೆ ಪಡೆಯುತ್ತಿದ್ದಾರೆ. ಇವರಿಗೆ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ನೀಡಿ ಗ್ಯಾಸ್ ಸಂಪರ್ಕ ನೀಡಲಾಗುವುದು. ಮನಪಾ ವ್ಯಾಪ್ತಿಯಲ್ಲಿ ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಮತ್ತು 1 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿದವರಿಗೆ ನಗರಪಾಲಿಕೆಯ ಸಹಾಯಧನ ಮೂಲಕ ಹಾಗೂ ಉಳಿದವರಿಗೆ ಡಿಸಿಸಿ ಬ್ಯಾಂಕ್ ಮತ್ತು ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಸಾಲ ಒದಗಿಸಿ, ಗ್ಯಾಸ್ ಸಂಪರ್ಕ ಒದಗಿಸಲಾಗುವುದು. ಸಾಲವನ್ನು ಮಾಸಿಕ ಕಂತುಗಳ ಮೂಲಕ ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿ ವಿವರಿಸಿದರು. ಗ್ಯಾಸ್ ಸಂಪರ್ಕ ಪಡೆದುಕೊಂಡರೆ ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಬದಲಾಗುತ್ತದೆ ಎಂದು ಜನ ಸಾಮಾನ್ಯರು ಆತಂಕಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಮುಂದಿನ ಎರಡು ದಿನಗಳಲ್ಲಿ ಪಾಲಿಕೆ ಹಾಗೂ ಉಳ್ಳಾಲ ಪುರಸಭೆ ವ್ಯಾಪ್ತಿಯಲ್ಲಿರುವ ಎಪಿಎಲ್ ಹಾಗೂ ಬಿಪಿಎಲ್ ಮನೆಗಳ ನಿಖರ ಮಾಹಿತಿ ಸಂಗ್ರಹಕ್ಕೆ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಉಪನಿರ್ದೇಶಕ ಶರಣಬಸಪ್ಪ, ಡಿಯುಡಿಸಿ ಯೋಜನಾ ನಿರ್ದೇಶಕ ತಾಕತ್ ರಾವ್, ಮಂಗಳೂರು ತಹಶೀಲ್ದಾರ್ ಮೋಹನ್ ರಾವ್ ಉಪಸ್ಥಿತರಿದ್ದರು.