ಮಂಗಳೂರು: ತುಳು ಮತ್ತು ಪ್ರಾಚೀನ ಮಲೆಯಾಳ ಭಾಷೆಯ ಲಿಪಿ ಸುಮಾರಾಗಿ ಒಂದೇ ತೆರನಾಗಿದೆ. ಹಳೆಯ ಮಲೆಯಾಳ ಲಿಪಿಯನ್ನು ಆಧಾರವಾಗಿಟ್ಟುಕೊಂಡು ತುಳು ಲಿಪಿಗೆ ಯುನಿಕೋಡ್ ಮಾಧ್ಯಮ ಅಳವಡಿಸಲಾಗಿದೆ ಎಂದು ಲಿಪಿ ತಜ್ಞ ನಾಡೋಜ ಡಾ| ಕೆ.ಪಿ. ರಾವ್ ಹೇಳಿದರು.
ಕೆ.ಪಿ. ರಾವ್ ನಿರ್ಮಾಣದ ಯೂನಿಕೋಡ್ ಮಾಧ್ಯಮದಲ್ಲಿ ತುಳು ಲಿಪಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಚಾವಡಿಯಲ್ಲಿ ಬಿಡುಗಡೆಗೊಳಿಸಿ ಅವರು ಸೋಮವಾರ ಮಾತನಾಡಿದರು.
ಎಲ್ಲ ಭಾಷೆಗಳ ಮೂಲ ಬ್ರಾಹ್ಮಿ ಲಿಪಿಯಾಗಿದೆ. ಆದರೆ ಅದಕ್ಕೂ ಹಿಂದೆ ಪಶ್ಚಿಮ ಸಿಲೋನ್‌ನಲ್ಲಿ ಲಿಪಿಯೊಂದು ಹುಟ್ಟಿಕೊಂಡಿತೆಂದು ಹೇಳಲಾಗುತ್ತಿದೆ ಎಂದ ಅವರು, ಪ್ರಾಚೀನ ಮಲೆಯಾಳ ಭಾಷಾ ಲಿಪಿ ಮತ್ತು ತುಳು ಲಿಪಿ ಒಂದೇ ರೀತಿಯಾಗಿರುವುದರಿಂದ ಮಲೆಯಾಳ ಲಿಪಿಯ ಆಧಾರದಲ್ಲಿ ತುಳು ಲಿಪಿಯ ಯುನಿಕೋಡ್ ತಯಾರಿಸಲಾಗಿದೆ. ಕಾಲಕ್ಕೆ ತಕ್ಕಂತೆ ಅದನ್ನು ಬದಲಾಯಿಸುವ ಅವಕಾಶವಿದೆ. ಆದರೆ ಬದಲಾಯಿಸುವುದು ಸುಲಭದ ಕೆಲಸವೂ ಅಲ್ಲ ಎಂದು ಹೇಳಿದರು.
ಅಕಾಡೆಮಿ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ತುಳು ಲಿಪಿ ವಿನ್ಯಾಸಕಾರ ಮಣಿಪಾಲದ ಎಂ.ಜಿ. ಥಾಮಸ್ ಮುಖ್ಯ ಅತಿಥಿಯಾಗಿದ್ದರು.
ತುಳು ಲಿಪಿ ತಜ್ಞ ಡಾ| ರಾಧಾಕೃಷ್ಣ ಬೆಳ್ಳೂರು, ಭಾಷಾ ವಿಜ್ಞಾನಿ ತುಳು ನಿಘಂಟು ಸಂಪಾದಕ ಡಾ| ಯು.ಪಿ. ಉಪಾಧ್ಯಾಯ, ತುಳು ಲಿಪಿ ತಜ್ಞ ಡಾ| ಎಸ್.ಆರ್. ವಿಘ್ನರಾಜ್, ಪ್ರಾಚ್ಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ| ಎಸ್.ಎ. ಕೃಷ್ಣಯ್ಯ ಅತಿಥಿಗಳಾಗಿದ್ದರು.
ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಸದಸ್ಯರಾದ ಮೋಹನ ಕೊಪ್ಪಳ ಕದ್ರಿ ವಂದಿಸಿದರು. ದುರ್ಗಾಪ್ರಸಾದ್ ರೈ ನಿರೂಪಿಸಿದರು.