ಕರಾವಳಿ

ಮೈತ್ರಿಯಾ ಜೊತೆ ಸಂಬಂಧವಿಲ್ಲ: ಕಾರ್ತಿಕ್

Pinterest LinkedIn Tumblr

KARTHIK_

ಬೆಂಗಳೂರು,ಸೆ.16: ನಟಿ ಮೈತ್ರಿಯಾ ತನ್ನ ಮೇಲೆ ಮಾಡಿರುವ ಎಲ್ಲ ಆರೋಪಗಳು ಸುಳ್ಳು. ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಹೇಳಿದ್ದಾರೆ.

ತನ್ನ ವಿರುದ್ಧ ದೂರು ದಾಖಲಾದ ನಂತರ ಮಾಧ್ಯಮಗಳ ಕೈಗೆ ಸಿಗದೆ ಕದ್ದುಮುಚ್ಚಿ ಓಡಾಡುತ್ತಿದ್ದ ಕಾರ್ತಿಕ್‌ಗೌಡ ಇದೇ ಮೊದಲ ಬಾರಿಗೆ ಮಾಧ್ಯಮಗಳ ಜತೆ ಮಾತನಾಡಿದ್ದು, ಮೈತ್ರಿಯಾ ಜತೆಗಿನ ಸಂಬಂಧ ಹಾಗೂ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಆದೇಶದಂತೆ ಸಹಿ ಹಾಕಲು ಆರ್.ಟಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ಕಾರ್ತಿಕ್ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಆಕೆಯೊಂದಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಹೀಗಿರುವಾಗ ಅತ್ಯಾಚಾರ, ಅಪಹರಣ ಎಲ್ಲವೂ ಸುಳ್ಳು. ನಮ್ಮ ತಂದೆಯ ಮರ್ಯಾದೆ ಕಳೆಯಲು ಆಕೆ ಈ ರೀತಿ ಮಾಡಿದ್ದಾಳೆ ಎಂದು ಸ್ಪಷ್ಟಪಡಿಸಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಆರೋಪದಿಂದ ಮುಕ್ತನಾಗುವ ಭರವಸೆ ಇದೆ ಎಂದರು. ಮಂಗಳೂರಿನ ಮನೆಗೆ ಕರೆದೊಯ್ದು ಅರಿಶಿನ ಕೊಂಬು ಕಟ್ಟಿದ್ದಾಗಿ ಮೈತ್ರಿಯಾ ಆರೋಪಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರ್ತಿಕ್, ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ. ಹೀಗಾಗಿ ಪ್ರಕರಣದ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಹೋದರು.

ಮೈತ್ರಿಯಾ ಸಲ್ಲಿಸಿದ್ದ ಅತ್ಯಾಚಾರ ದೂರು ಸಂಬಂಧ ಕಾರ್ತಿಕ್‌ಗೆ ಜಾಮೀನು ನೀಡಿದ ನ್ಯಾಯಾಲಯ ಪ್ರತಿ ತಿಂಗಳು 15 ಹಾಗೂ 30 ರಂದು ಪೊಲೀಸ್ ಠಾಣೆಗೆ ಹಾಜರಾಗಬೇಕು ಹಾಗೂ ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿತ್ತು.
ಹಾಗಾಗಿ ಕಾರ್ತಿಕ್ ಬೆಳಗ್ಗೆ ತಮ್ಮ ವಕೀಲರ ಜತೆ ಎಸಿಪಿ ಓಂಕಾರಯ್ಯ ಅವರ ಕಚೇರಿಗೆ ಆಗಮಿಸಿ ಸಹಿ ಹಾಕಿ ಹಿಂದಿರುಗಿದರು.

Write A Comment