ಮಂಗಳೂರು, ಸೆ.19: ಭಾರತೀಯ ತೈಲ ಸಂಸ್ಥೆ (ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್)ಯ ತಣ್ಣೀರುಬಾವಿಯ ಮಂಗಳೂರು ಘಟಕದಲ್ಲಿ ತುರ್ತು ಅವಘಡ ನಿರ್ವಹಣೆಯ ಕುರಿತಂತೆ ಅಣಕು ಪ್ರದರ್ಶನ ನಡೆಯಲಾಯಿತು . ಕಾರ್ಖಾನೆ ಕಾಯ್ದೆಗಳ ಪ್ರಕಾರ ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಅಪಾಯಕಾರಿ ಕಾರ್ಖಾನೆಗಳಲ್ಲಿ ಸುರಕ್ಷತಾ ಮುಂಜಾಗೃತಾ ಕ್ರಮವಾಗಿ ನಡೆಸಬೇಕಾದಂತಹ ಅಣಕು ಪ್ರದರ್ಶನ ಇದಾಗಿದ್ದು, ಮಂಗಳೂರು ಪೊಲೀಸ್ ಆಯುಕ್ತ ಆರ್.ಹಿತೇಂದ್ರರ ಉಪಸ್ಥಿತಿ ಹಾಗೂ ಐಒಸಿಎಲ್‌ನ ಮಂಗಳೂರು ಘಟಕದ ಮುಖ್ಯ ವ್ಯವಸ್ಥಾಪಕ ಎಸ್.ಕೆ.ಚೌಧುರಿ ನೇತೃತ್ವದಲ್ಲಿ ಈ ಅಣುಕು ಪ್ರದರ್ಶವನ್ನು ಆಯೋಜಿಸಿದರು.
ಸುಮಾರು 20 ನಿಮಿಷಗಳ ಅಣಕು ಪ್ರದರ್ಶನದ ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರ್ಖಾನೆ ಮತ್ತು ಬಾಯ್ಲರ್‌ಗಳ ಸುರಕ್ಷತಾ ಇಲಾಖೆಯ ಉಪ ನಿರ್ದೇಶಕ ನಂಜಪ್ಪ, ಸಂಭವನೀಯ ಅಪಘಾತಗಳ ಸಂದರ್ಭ ನಿರ್ವಹಿಸಬೇಕಾದ ತುರ್ತು ಕಾರ್ಯಾಚರಣೆಗಳ ಕುರಿತಂತೆ ಮುಂಜಾಗೃತಾ ಕ್ರಮವಾಗಿ ಇಂತಹ ಅಣುಕು ಪ್ರದರ್ಶನಗಳನ್ನು ನಡೆಸುವ ಮೂಲಕ ಸಿಬ್ಬಂದಿಯನ್ನು ಜಾಗೃತಗೊಳಿಸಲಾಗುತ್ತದೆ ಎಂದರು. ಅಪಾಯಕಾರಿ ಕಾರ್ಖಾನೆಗಳು ಸೇರಿದಂತೆ ಎಲ್ಲಾ ರೀತಿಯ ಕಾರ್ಖಾನೆಗಳು ಸಂಬಂಧಿತ ಕಾಯ್ದೆಯಡಿ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದ್ದು, ಈ ಕಾಯ್ದೆಯ ಪ್ರಕಾರ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆ, ಕಲ್ಯಾಣ ಸೌಲಭ್ಯ, ಉತ್ತಮ ಕೆಲಸದ ವಾತಾವರಣವನ್ನು ಖಾತರಿಪಡಿಸಬೇಕಾಗುತ್ತದೆ. ಈ ಬಗ್ಗೆ ಮಾಹಿತಿ ಹಾಗೂ ಪರಿಶೀಲನೆ ಹಾಗೂ ಸುರಕ್ಷತೆಯನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ ಇಂತಹ ಅಣಕು ಪ್ರದರ್ಶನಗಳನ್ನು ಐಒಸಿಎಲ್ ಸೇರಿದಂತೆ ಜಿಲ್ಲೆಯಲ್ಲಿ ಅಪಾಯಕಾರಿ ಎಂದು ಗುರುತಿಸಲಾಗಿರುವ 10 ಕಾರ್ಖಾನೆಗಳಲ್ಲಿ ನಿರಂತರವಾಗಿ ನಡೆಸಲಾಗುತ್ತದೆ ಎಂದು ಅವರು ಹೇಳಿದರು.