ಕುಂದಾಪುರ: ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಮೀನುಗಾರರ ಬೇಡಿಕೆಯ ಹಿನ್ನಲೆಯಲ್ಲಿ ತುರ್ತಾಗಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಡ್ರಜ್ಜಿಂಗ್ ಕಾಮಗಾರಿಯನ್ನು ಇನ್ನೊಂದು ವಾರದಲ್ಲಿ ಪ್ರಾರಂಭಿಸಲಾಗುವುದು. ಮುಂದಿನ ನಾಲ್ಕೈದು ದಿನಗಳಲ್ಲಿ ಶಾಸಕರೊಂದಿಗೆ ಸೇರಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಬಂದರು, ಜವಳಿ ಹಾಗೂ ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದರು.
ಅವರು ಶುಕ್ರವಾರ ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶ ಹಾಗೂ ಅಳಿವೆ ಪ್ರದೇಶಗಳಿಗೆ ಭೇಟಿ ನೀಡಿ ಮೀನುಗಾರರ ಸಮಸ್ಯೆ ಆಲಿಸಿ ಈ ಭರವಸೆ ನೀಡಿದರು.
ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಜಂಟಿ ಸಹಯೋಗದಲ್ಲಿ ಬ್ರೇಕ್ ವಾಟರ್ ಕಾಮಗಾರಿಗೆ 102 ಕೋಟಿ ರೂ. ಮಂಜೂರಾಗಿದ್ದು, ಈ ಯೋಜನೆ ಟೆಂಡರ್ ಆಗಿ ಕಾರ್ಯರೂಪಕ್ಕೆ ಬರಲು ಸ್ವಲ್ಪ ವಿಳಂಬವಾಗಲಿದೆ. ಹೀಗಾಗಿ ಬಂದರಿನಲ್ಲಿ ತುರ್ತಾಗಿ ಡ್ರಜ್ಜಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಇನ್ನೊಂದು ವಾರದಲ್ಲಿ ಅಳಿವೆ ಪ್ರದೇಶದಲ್ಲಿ ಡ್ರಜ್ಜಿಂಗ್ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ಮೀನುಗಾರರ ಅಭಿವೃದ್ಧಿ ಹಾಗೂ ಹಿತದೃಷ್ಟಿಯಿಂದ ರಾಜ್ಯದ ಇತಿಹಾಸದಲ್ಲೇ ಉತ್ತರಕನ್ನಡ, ಉಡುಪಿ ಹಾಗೂ ದಕ್ಷಿಣ ನ್ನಡ ಜಿಲ್ಲೆಗಳಿಗೆ ಸೀಮಿತವಾಗಿರಿಸಿ ಮೈನರ್ ಪೋರ್ಟ್ ಪಾಲಿಸಿಯನ್ನು ಜಾರಿಗೆ ತರಲಾಗಿದ್ದು, ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ದೊರೆತಿದೆ. ಈ ಯೋಜನೆಯಿಂದ ಈ ಮೂರು ಜಿಲ್ಲೆಗಳ ಸುಮಾರು 12 ಬಂದರುಗಳು ಹಂತ ಹಂತವಾಗಿ ಅಭಿವೃದ್ಧಿಗೊಳ್ಳಲಿದೆ ಹಾಗೂ ಮೆರಿಟೈಮ್ ಬೋಟ್ ಕೂಡ ಸ್ಥಾಪನೆಗೊಳ್ಳಲಿದೆ.
ಸಿದ್ಧರಾಮಯ್ಯ ನೇತೃತ್ವದ ಸರಕಾರ ಈ ಭಾಗದ ಮೀನುಗಾರರಿಗೆ ವಿಶೇಷ ಕೊಡುಗೆಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಮೀನುಗಾರರ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಿ ಮೀನುಗಾರರು ನೆಮ್ಮದಿಯ ಜೀವನ ನಡೆಸಲು ಸರಕಾರ ಎಲ್ಲಾ ರೀತಿಯ ಕ್ರಮಕೈಗೊಳ್ಳಲು ಸಿದ್ಧವಿದೆ ಎಂದು ಭರವಸೆ ನೀಡಿದರು.
ಇಲಾಖೆಯ ಅಧೀಕ್ಷಕ ಇಂಜಿನಿಯರ್ ಜಂಬಾಳ, ನಿರ್ದೇಶಕ ಮೋಹನ್, ಕುಂದಾಪುರ ಉಪವಿಭಾಗಾಧಿಕಾರಿ ಯೋಗೇಶ್ವರ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಗಣೇಶ್, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಕೆ.ನಾಗ ಖಾರ್ವಿ, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುರೇಂದ್ರ ಡಿ.ಖಾರ್ವಿ, ಗಂಗೊಳ್ಳಿ ಗ್ರಾಮೀಣ ಕಾಂಗ್ರೇಸ್ ಅಧ್ಯಕ್ಷ ದುರ್ಗರಾಜ್ ಪೂಜಾರಿ, ಮೀನುಗಾರ ಮುಖಂಡಾರದ ಪುಂಡಲೀಕ ಬಂಗೇರ, ಕೃಷ್ಣ ಕೋಟಾನ್, ನಾಗಪ್ಪಯ್ಯ ಪಟೇಲ್, ಮಂಜುನಾಥ ಖಾರ್ವಿ, ಶಿವಪ್ಪ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.