ಕುಂದಾಪುರ: ಕೇವಲ ಒಂದು ವರ್ಷ ನಾಲ್ಕು ತಿಂಗಳಿನಲ್ಲಿ ಸಚಿವರ ಸಾಧನೆಯನ್ನು ಅಳೆಯಲು ಗುರುತಿಸಲು ಸಾಧ್ಯವಿಲ್ಲ. ರಾಜ್ಯದ ಎಲ್ಲಾ ಸಚಿವರಿಗೆ ಕನಿಷ್ಠ 2-3 ವರ್ಷ ಅವಕಾಶ ನೀಡಬೇಕು. ಆ ಮೊದಲೇ ಸಚಿವರ ಸಾಧನೆಯನ್ನು ತುಲನೆ ಮಾಡುವುದು ಸರಿಯಲ್ಲ ಎಂದು ಬಂದರು, ಜವಳಿ ಹಾಗೂ ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಅಭಿಪ್ರಾಯಪಟ್ಟಿದ್ದಾರೆ.
ಗಂಗೊಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯನವರ ಸರಕಾರದಲ್ಲಿ ಯಾರೂ ಅಸಮರ್ಥ ಸಚಿವರಿಲ್ಲ. ಎಲ್ಲರೂ ಸಮರ್ಥವಾಗಿ ತಮ್ಮ ಇಲಾಖೆಯ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಸಂದರ್ಭ ಅಸಮರ್ಥ ಸಚಿವರನ್ನು ಕೈಬಿಡಲಾಗುತ್ತಿದೆ ಎಂದು ಮಾಹಿತಿ ಶುದ್ಧ ಸುಳ್ಳು ಎಂದು ಹೇಳಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯನವರು 13 ಅಸಮರ್ಥ ಸಚಿವರನ್ನು ಕೈಬಿಡಲಾಗುತ್ತಿದೆ ಎಂಬ ಸುದ್ಧಿಯನ್ನು ಅವರು ಸಾರಾಸಗಟಾಗಿ ನಿರಾಕರಿಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಸಚಿವ ಸಂಪುಟ ಪುನರ್ ರಚನೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದ್ದು, ಈ ಬಗ್ಗೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಸೂಕ್ತ ಕಾಲದಲ್ಲಿ ಈ ಬಗ್ಗೆ ನಿರ್ಧಾರಕೈಗೊಳ್ಳಲಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಡವರ, ದೀನದಲಿತರ ಹಾಗೂ ಹಿಂದುಳಿದ ಪರವಾಗಿ ಇದ್ದು, ರಾಜ್ಯ ಸರಕಾರ ಈಗಾಗಲೇ ಅನೇಕ ಜನರಪರ ಯೋಜನೆಗಳನ್ನು ನೀಡಿದೆ ಎಂದು ಹೇಳಿದರು.