ಕುಂದಾಪುರ: ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಿಂಚಿದ ಕುಂದಾಪುರ ತಾಲೂಕಿನ ಯುವ ಕಬ್ಬಡಿ ಆಟಗಾರ ರಿಶಾಂಕ್ ದೇವಾಡಿಗ ಗಂಗೊಳ್ಳಿ ಇಂದು ಗಂಗೊಳ್ಳಿಯ ಶಾಲಾ ವಿದ್ಯಾರ್ಥಿಗಳೊಂದಿಗೆ ಕಬ್ಬಡಿ ಆಟ ಆಡುವ ಮೂಲಕ ಗಮನ ಸೆಳೆದರು.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿದ ಸಂದರ್ಭ ಶಾಲೆಯ ಮತ್ತು ಸ್ಟೆಲ್ಲಾ ಮಾರೀಸ್ ಪ್ರೌಢಶಾಲೆಯ ಕಬ್ಬಡಿ ತಂಡದ ಆಟಗಾರರ ಜೊತೆ ಸುಮಾರು ಒಂದು ಗಂಟೆ ಕಾಲ ಕಬ್ಬಡಿ ಆಟವನ್ನು ಆಡುವ ಮೂಲಕ ಮಕ್ಕಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿದರು. ರೈಡರ್ ಆಗೊ ಪ್ರೊ. ಕಬ್ಬಡಿಯಲ್ಲಿ ಗಮನಸೆಳೆದಿದ್ದ ರಿಶಾಂಕ್ ಇಂದು ಶಾಲೆಯ ಮಕ್ಕಳೊಂದಿಗೆ ಕಬ್ಬಡಿ ಆಡಿ ಮಕ್ಕಳಿಗೆ ಕಬ್ಬಡಿ ಆಟದ ಬಗ್ಗೆ ಕೆಲವೊಂದು ಮಾಹಿತಿ ಮಾರ್ಗದರ್ಶನ ಮಾಡಿದರು.
ರಿಶಾಂಕ್ ದೇವಾಡಿಗ ಕಬ್ಬಡಿ ಕ್ರೀಡಾಂಗಣಕ್ಕೆ ಕಾಲಿಡುತ್ತಿದ್ದಂತೆಯೇ ನೆರೆದಿದ್ದ ವಿದ್ಯಾರ್ಥಿಗಳು ಸಂತಸಗೊಂಡು, ಶಾಲೆಯ ಕಬ್ಬಡಿ ಆಟಗಾರರ ಹಾಗೂ ರಿಶಾಂಕ್ ಆಟವನ್ನು ನೋಡಿ ಸಂಭ್ರಮಿಸಿದರು.
ರಿಶಾಂಕ್ ದೇವಾಡಿಗರ ತಾಯಿ ಪಾರ್ವತಿ ದೇವಾಡಿಗ, ಎಸ್.ವಿ.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮನಾ ಪಡಿಯಾರ್, ಸ್ಟೆಲ್ಲಾ ಮಾರೀಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊ, ಗ್ರಾಪಂ ಮಾಜಿ ಸದಸ್ಯ ಬಿ.ರಾಘವೇಂದ್ರ ಪೈ, ಮಾಧವ ದೇವಾಡಿಗ, ಶ್ರೀಧರ ದೇವಾಡಿಗ, ದಯಾನಂದ ದೇವಾಡಿಗ, ಗ್ರಾಪಂ ಸದಸ್ಯೆ ಮಂಜುಳಾ ದೇವಾಡಿಗ, ಮಹಮ್ಮದ್ ಹುಸೈನ್, ಎರಡೂ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಸಹಶಿಕ್ಷಕರು ಉಪಸ್ಥಿತರಿದ್ದರು.
ಸನ್ಮಾನ: ಗಂಗೊಳ್ಳಿಯ ಸ್ಟೆಲ್ಲಾ ಮಾರೀಸ್ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಜರಗಿದ ಸನ್ಮಾನ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಿಂಚಿದ ಯುವ ಕಬ್ಬಡಿ ಆಟಗಾರ ರಿಶಾಂಕ್ ದೇವಾಡಿಗ, ಕಬ್ಬಡಿ ಗ್ರಾಮೀಣ ಕ್ರೀಡೆ ಎನ್ನುವುದು ಸರಿಯಲ್ಲ. ಕಬ್ಬಡಿ ಇದೀಗ ರಾಷ್ಟ್ರೀಯ ಕ್ರೀಡೆಯಾಗಿ ಎಲ್ಲರ ಗಮನ ಸೆಳೆದಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕೂಡ ಕಬ್ಬಡಿ ಆಟದ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದ್ದು, ಇದೇ ಆಟವನ್ನು ಮುಂದುವರಿಸಿಕೊಂಡು ಹೋದಲ್ಲಿ ಮುಂದೊಂದು ದಿನ ಕಬ್ಬಡಿ ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಲಿದೆ ಎಂದರು.
ಸ್ಟೆಲ್ಲಾ ಮಾರೀಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಶುಭ ಹಾರೈಸಿದರು. ರಿಶಾಂಕ್ ದೇವಾಡಿಗರ ತಾಯಿ ಪಾರ್ವತಿ ದೇವಾಡಿಗ, ಗ್ರಾಪಂ ಸದಸ್ಯರಾದ ಮಂಜುಳಾ ದೇವಾಡಿಗ, ಮುಜಾಹಿದ್ ಅಲಿ ನಾಕುದಾ ಮೊದಲಾದವರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಾಗರಾಜ ಖಾರ್ವಿ ಜಿಎಫ್‌ಸಿಎಸ್ ಸ್ವಾಗತಿಸಿ, ಮಹಮ್ಮದ್ ಹುಸೈನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.