ಮಂಗಳೂರು,ಸೆ.20: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾದ ಶ್ರೀಮತಿ ಮಲ್ಲಿಕಾ ಪ್ರಸಾದ್‌ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಆಗಸ್ಟ್ 15 ರಂದು ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೆಂಪು ಕೋಟೆಯಿಂದ ಭವ್ಯ ಭಾರತದ ನಿರ್ಮಾಣದ ಘೋಷಣೆಯನ್ನು ಮಾಡುತ್ತಾ ಸ್ವಚ್ಛ ಭಾರತದ ಕಲ್ಪನೆಯನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಹೆಣ್ಣುಮಕ್ಕಳು ಹೆಚ್ಚಿನ ಶಿಕ್ಷಣದಿಂದ ಹಿಂದೆ ಉಳಿಯುವುದಕ್ಕೆ ಶೌಚಾಲಯಗಳ ಕೊರತೆಯನ್ನು ಉಲ್ಲೇಖಿಸುತ್ತಾ ಶೌಚಾಲಯದ ಅಗತ್ಯತೆಯನ್ನು ಒತ್ತಿ ಹೇಳಿರುತ್ತಾರೆ. ಸಹೋದರಿ ನಿವೇದಿತಾ ಜಯಂತಿಯನ್ನು ಪ್ರತೀ ವರ್ಷ ಸೇವಾ ಚಟುವಟಿಕೆಯನ್ನಾಗಿ ಬಿಜೆಪಿ ಮಹಿಳಾ ಮೋರ್ಚಾ ಆಚರಿಸುತ್ತಾ ಬಂದಿರುತ್ತದೆ.
ಸ್ವಚ್ಛ ಭಾರತದ ಕಲ್ಪನೆಯ ಹಿನ್ನೆಲೆಯಲ್ಲಿ ಈ ಬಾರಿ ಪ್ರತೀ ಮಂಡಲದಲ್ಲಿ ತೀರಾ ಅಗತ್ಯವಿರುವ ಪ್ರೌಢ ಶಾಲೆ ಅಥವಾ ಕಾಲೇಜಿನಲ್ಲಿ ಒಂದರಂತೆ ಶೌಚಾಲಯವನ್ನು ನಿರ್ಮಾಣ ಮಾಡುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು ಹಾಗೂ ಮಹಿಳಾ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ವಿಚಾರ ಸಂಕೀರ್ಣಗಳನ್ನು ಯೋಜಿಸಲು ನಿಶ್ಚಯ ಮಾಡಲಾಯಿತು.
ರಾಜ್ಯ ಉಪಾಧ್ಯಕ್ಷೆಯಾದ ಶ್ರೀಮತಿ ಸುಲೋಚನಾ ಜಿ.ಕೆ ಭಟ್, ಮಹಿಳಾ ಮೋರ್ಚಾ ಪ್ರಭಾರಿ ಶ್ರೀಮತಿ ಶಾರದಾ ರೈ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀ ಜ್ಯೇಷ್ಠ ಪಡಿವಾಳ್, ದ.ಕ ಜಿ.ಪಂ. ಅಧ್ಯಕ್ಷೆ ಶ್ರೀಮತಿ ಆಶಾ ತಿಮ್ಮಪ್ಪ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರೂಪಾ. ಡಿ ಬಂಗೇರ, ಶ್ರೀಮತಿ ಜಯಂತಿ ನಾಯಕ್ ಹಾಗೂ ಪದಾಧಿಕಾರಿಗಳು ಮೊದಲಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.