ಉಳ್ಳಾಲ : ಕ್ಷುಲ್ಲಕ ವಿಚಾರಕ್ಕಾಗಿ ಎರಡು ತಂಡಗಳ ನಡುವೆ ನಡೆದ ಹೊಡೆದಾಟದಿಂದ ಇತ್ತಂಡಗಳ 8 ಮಂದಿ ಗಂಭೀರ ಗಾಯಗೊಂಡ ಘಟನೆ ದೇರಳಕಟ್ಟೆಯ ಹರೇಕಳ ಗ್ರಾಮದ ಪಾವೂರು ದೆಬ್ಬೇಲಿಯಲ್ಲಿ ಬಾನುವಾರ ನಡೆದಿದೆ. ಗಾಯಾಳುಗಳು ಬೇರೆ ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದು ತಂಡದ ಗಾಯಳುಗಳನ್ನು ಡೆಬ್ಬೇಲಿ ನಿವಾಸಿಗಳಾದ ಮಿಥುನ್ ಪೂಂಜಾ(25), ಪ್ರಸಾದ್(28),ಗಿರೀಶ್ ಆಚಾರ್ಯ(33), ಸತ್ಯಪ್ರಸಾದ್(30), ಸಚಿನ್ (25) ಎಂದು ಗುರುತಿಸಲಾಗಿದ್ದು, ಇವರು ದೇರಳಕಟ್ಟೆಯ ನಿಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ತಂಡದ ಗಾಯಳುಗಳನ್ನು ಪಾವೂರು ಬೈತಾರ್ ನಿವಾಸಿಗಳಾದ ಫಯಾಝ್(23), ಅಮೀರ್(25), ಅಝರುದ್ಧೀನ್(20) ಎಂದು ಹೆಸರಿಸಲಾಗಿದ್ದು, ಅವರು ದೇರಳಕಟ್ಟೆಯ ಯೇನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡು ದಿನಗಳ ಹಿಂದೆ ದೆಬ್ಬೇಲಿಯ ಜಯಂತ್ ತನ್ನ ಇಬ್ಬರು ಸ್ನೇಹಿತರೊಂದಿಗೆ ದಬ್ಬೇಲಿ ಬಳಿ ನಿಂತಿದ್ದಾಗ ಬೈತಾರ್ ನಿವಾಸಿ ನಿಝಾಮ್ ತನ್ನ ರಿಕ್ಷಾ ಬಂದಿದ್ದು, ಈ ಸಂದರ್ಭದಲ್ಲಿ ನಿಝಾಮ್ ವ್ಯಂಗ ಮಾಡಿದ್ದಾರೆ ಎಂದು ಆರೋಪಿಸಿ ನಿಝಾಮ್‌ಗೆ ಹೊಡೆದಿದ್ದರು. ಇದೇ ವಿಚಾರದಲ್ಲಿ ನಿಝಾಮ್‌ನ ಸಹೋದರು ಮತ್ತು ಅವರ ಸ್ನೇಹಿತರೊಂದಿಗೆ ಜಯಂತ್ ಅವರ ಮನೆಗೆ ಬಂದಿದ್ದು, ಜಯಂತ್ ಬದಲು ಬೇರೆ ಮನೆಗೆ ತೆರಳಿ ವಿಚಾರಿಸಿದ ಸಂದರ್ಭದಲ್ಲಿ ಸಣ್ಣ ಮಟ್ಟದ ಮಾತಿನ ಚಕಮಕಿ ನಡೆದಿತ್ತು. ಬಳಿಕ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡು ತಂಡಗಳ ನಡುವೆ ಸೌಹಾರ್ಧತೆಯಲ್ಲಿ ಪ್ರಕರಣವನ್ನು ಮುಗಿಸುವ ನಿಟ್ಟಿನಲ್ಲಿ ಮಾತುಕತೆ ನಡೆದಿತ್ತು.
ಇಂದು ರಜಾ ದಿನವಾದ್ದರಿಂದ ಬೆಳಗ್ಗೆ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿತ್ತು. ಹೊಡೆದಾಟ ವಿಚಾರದಲ್ಲಿ ಗಾಯಗೊಂಡಿರುವ ಎರಡು ತಂಡಗಳ ಸದಸ್ಯರು ಇತ್ತಂಡ ವಾದಗಳನ್ನು ಮುಂದಿಟ್ಟಿದ್ದು ದಾಳಿ ನಡೆಸಿದ್ದು ತಮ್ಮ ವಿರೋಧಿವ ಬಣವೇ ಎಂದು ಆರೋಪಿಸಿದ್ದಾರೆ.
ಗಾಯಗೊಂಡಿರುವ ಫಯಾಝ್ ಹೇಳುವಂತೆ ತಾನು ಸೇರಿದಂತೆ ಅಮೀರ್, ಆಝರುದ್ಧೀನ್ ನೂತನ ಮಸೀದಿಯೊಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ನಡೆದುಕೊಂಡು ಹೋಗುತ್ತಿರುವಾಗ 15 ಜನರ ತಂಡ ಮಾರಕಾಸ್ತ್ರಗಳೊಂದಿಗೆ ಆಗಮಿಸಿ ತಮಗೆ ಹಲ್ಲೆ ನಡೆಸಿದ್ದು, ಇದರಿಂದ ತನ್ನ ಬೆನ್ನು ಕೈ ಕಾಲುಗಳಿಗೆ ಗಾಯವಾಗಿದ್ದು, ತನ್ನ ಸ್ನೇಹಿತರು ಗಾಯಗೊಂಡಿದ್ದಾರೆ ಎಂದಿದ್ದಾರೆ.
ಇನ್ನೊಂದು ತಂಡದ ಮಿಥುನ್ ಹೇಳುವಂತೆ ನಾವು ಎಂದಿನಂತೆ ಬೆಳಗ್ಗೆ ಆರ್‌ಎಸ್‌ಎಸ್ ಶಾಖೆ ಮುಗಿಸಿ ತನ್ನ ಮನೆಗೆ ತಾಗಿಕೊಂಡಿರುವ ಗ್ರೌಂಡ್‌ನಲ್ಲಿ ಸಂಘದ ವಿಚಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾತುಕತೆ ನಡೆಸುತ್ತಿದ್ದೆವು ಈ ಸಂದರ್ಭದಲ್ಲಿ 40ಕ್ಕಿಂತಲೂ ಹೆಚ್ಚು ಇದ್ದ ಯುವಕರ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಗಿರೀಶ್ ಆಚಾರ್ಯ ಅವರ ತೆಲೆಗೆ ಗಂಭೀರವಾಗಿ ಗಾಯಗೊಳಿಸಿದ್ದಾರೆ. ತನ್ನ ಕುತ್ತಿಗೆ ಮತ್ತು ಬೆನ್ನಿಗೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು ಉಳಿದಂತೆ ನಮ್ಮೊಂದಿಗಿದ್ದ ಪ್ರಸಾದ್, ಗಿರೀಶ್ ಆಚಾರ್ಯ, ಸತ್ಯಪ್ರಸಾದ್, ಸಚಿನ್ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ಘಟನೆಯ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಮಿಥುನ್ ಪೂಂಜಾ ಅವರ ಮನೆಗೆ ತಂಡ ಹಾನಿ ಮಾಡಿದ್ದು, ಈ ಬಗ್ಗೆ ಕೂಡ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.