ಮಂಗಳೂರು: ವರದಕ್ಷಿಣೆ ವಿಚಾರವಾಗಿ ಗಂಡ ಮತ್ತು ಆತನ ಸಂಬಂಧಿಕರ ಮೇಲೆ ಸುಳ್ಳು ವರದಕ್ಷಿಣೆ ಕೇಸು ದಾಖಲಿಸಿದ್ದ ಪತ್ನಿ ಮತ್ತು ಆಕೆಯ ತಂದೆಗೆ ಮಂಗಳೂರಿನ ಜೆ. ಎಂ.ಎಫ್.ಸಿ. ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
ದಾವಣಗೆರೆಯ ಮಹಿಳಾ ವೈದ್ಯೆ ಡಾ| ರಂಜಿತಾ ಶೆಣೈ ಮತ್ತು ಆಕೆಯ ತಂದೆ ರತ್ನಾಕರ ಶೆಣೈ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದ್ದು, ಅವರೀಗ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬರ್ಕೆ ಪೊಲೀಸರು ವಾರಂಟ್ ಜಾರಿಗೊಳಿಸುವುದಕ್ಕಾಗಿ ಸೆ. 20ರಂದು ದಾವಣಗೆರೆಗೆ ತೆರಳಿದ್ದಾರೆ.
ದಾವಣಗೆರೆಯ ಡಾ| ರಂಜಿತಾ ಶೆಣೈ ಅವರ ವಿವಾಹ ಮಂಗಳೂರಿನ ಡಾ| ಗುರುಕಾಂತ್ ರಾವ್ ಅವರೊಂದಿಗೆ ನೆರವೇರಿತ್ತು. ವಿವಾಹದ ಬಳಿಕ ಕೇವಲ 15 ದಿನ ಮಾತ್ರ ಗಂಡನ ಜತೆ ವಾಸ್ತವ್ಯವಿದ್ದ ಡಾ| ರಂಜಿತಾ ಅವರು ತನ್ನ ಹೆತ್ತವರ ಮನೆಯಿರುವ ದಾವಣಗೆರೆಗೆ ಬಂದು ವಾಸ್ತವ್ಯ ಮಾಡುವಂತೆ ಒತ್ತಾಯಿಸಲು ಆರಂಭಿಸಿದ್ದರು. ಅದಕ್ಕೆ ಡಾ| ಗುರುಕಾಂತ್ ರಾವ್ ಒಪ್ಪದಿದ್ದಾಗ ವಿವಾಹ ವಿಚ್ಛೇದನಕ್ಕೆ ಮತ್ತು 1 ಕೋಟಿ ರೂ. ಪರಿಹಾರ ನೀಡುವಂತೆ ಆಗ್ರಹಿಸಿ, ಹಣ ಕೊಡದಿದ್ದರೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಆಕೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಡಾ| ಗುರುಕಾಂತ್ ರಾವ್ ಈಗಾಗಲೇ ಮೆಡಿಕಲ್ ಕಾಲೇಜು ಒಂದರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದು, ಈ ವಿದ್ಯಮಾನದ ಬಳಿಕ ಡಾ| ರಂಜಿತಾ ಅವರು ಗಂಡನಿಗೆ ತಿಳಿಸದೆ ಬೇರೊಂದು ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇರಿಕೊಂಡರು. ಆಕೆ ಮಂಗಳೂರಿನಲ್ಲಿದ್ದ ವಿಷಯ ತಿಳಿದ ಡಾ| ಗುರುಕಾಂತ್ ರಾವ್ ಆಕೆಯನ್ನು ಭೇಟಿಯಾಗಿ ತನ್ನ ಜತೆ ಬರುವಂತೆ ಕೇಳಿ ಕೊಂಡಾಗ ಆಕೆ ನಿರಾಕರಿಸಿ ವಿಚ್ಛೇದನ ಮತ್ತು 1 ಕೋಟಿ ರೂ. ಪರಿಹಾರ ಮೊತ್ತಕ್ಕೆ ಆಗ್ರಹಿಸಿದರು. ಅದಕ್ಕೆ ಡಾ| ಗುರುಕಾಂತ್ ಒಪ್ಪದಿದ್ದಾಗ ಆಕೆ ಪಾಂಡೇಶ್ವರ ಪೊಲೀಸ್ ಠಾಣೆಗೆ ತೆರಳಿ ಗಂಡ ಮತ್ತು ಮಾವ ಡಾ| ಎನ್.ಆರ್. ರಾವ್ ವಿರುದ್ಧ ವರದಕ್ಷಿಣೆ ಬೇಡಿಕೆ, ದೈಹಿಕ ಮತ್ತು ಮಾನಸಿಕ ಕಿರುಕುಳ ಹಾಗೂ ಮನೆಯಿಂದ ಹೊರ ಹಾಕಿದ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಆಕೆಯ ತಂದೆ ರತ್ನಾಕರ ಶೆಣೈ ಮತ್ತು ತಾಯಿ ಜಮುನಾ ರಾಣಿ ಶೆಣೈ ಅವರೂ ವರದಕ್ಷಿಣೆ ಬೇಡಿಕೆ ಸಂಬಂಧಿತ ಹೇಳಿಕೆಗಳನ್ನು ಪೊಲೀಸರಿಗೆ ನೀಡಿದ್ದರು ಎಂದು ಆಪಾದಿಸಲಾಗಿದೆ.
ಪೊಲೀಸರು ಡಾ| ಗುರುಕಾಂತ್ ಮತ್ತವರ ಹೆತ್ತವರನ್ನು ಕರೆಸಿ ಕೂಲಂಕುಶ ತನಿಖೆ ನಡೆಸಿದಾಗ ಡಾ| ರಂಜಿತಾ ನೀಡಿರುವುದು ಸುಳ್ಳು ದೂರು ಎಂಬ ತೀರ್ಮಾನಕ್ಕೆ ಬಂದು ಪ್ರಕರಣವನ್ನು ಮುಚ್ಚಿದ್ದರು.
ಈ ವಿದ್ಯಮಾನದಿಂದ ತೀವ್ರ ಮನ ನೊಂದ ಡಾ| ಎನ್.ಆರ್. ರಾವ್ ಕುಟುಂಬದವರು ಡಾ| ರಂಜಿತಾ ಮತ್ತವರ ಹೆತ್ತವರು ತಮ್ಮ ವಿರುದ್ಧ ಸುಳ್ಳು ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾರೆಂದು ಆರೋಪಿಸಿ ವಕೀಲ ಪಿ.ಪಿ. ಹೆಗ್ಡೆ ಮೂಲಕ ಮಂಗಳೂರಿನ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ದಾವೆ ದಾಖಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ಡಾ| ರಂಜಿತಾ ಮತ್ತವರ ಹೆತ್ತವರು ದಾಖಲಿಸಿದ್ದ ದೂರು ಸುಳ್ಳು ಎಂಬ ತೀರ್ಮಾನಕ್ಕೆ ಬಂದು ಅವರ ಬಂಧನಕ್ಕೆ ಸೆ. 17ರಂದು ವಾರಂಟ್ ಹೊರಡಿಸಿದೆ.