ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುತ್ತಿರುವ ಮಂಗಳೂರು ದಸರಾಕ್ಕೆ ಪ್ರತೀ ವರ್ಷದಂತೆ ಈ ಬಾರಿ ಕೂಡ ಮಂಗಳೂರು ಸಜ್ಜಾಗಿದೆ.ಮಂಗಳೂರು ದಸರಾ ಮಹೋತ್ಸವದ ಪ್ರಮುಖ ಕೇಂದ್ರವಾದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವನ್ನು ಬಣ್ಣ ಬಣ್ಣಗಳ ವಿದ್ಯುತ್ ದೀಪಾಲಂಕಾರ ಗಳಿಂದ ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಜಗಮಗಿಸುವ ಕ್ಷೇತ್ರದ ಒಳಾಂಗಣದಲ್ಲಿರುವ ಪುಷ್ಕರಣಿಯ ಸುತ್ತಮುತ್ತ ಚಿಮ್ಮುವ ಬಣ್ಣದ ಕಾರಂಜಿಗಳನ್ನು ನೋಡುವುದೇ ಒಂದು ಹಬ್ಬ. ಇದೀಗ ಸಂಪೂರ್ಣ ಕುದ್ರೋಳಿ ಕ್ಷೇತ್ರ ವರ್ಣಾಲಂಕಾರದಿಂದ ಶೋಭಿಸತೊಡಗುತ್ತಿದೆ.
ಮಾತ್ರವಲ್ಲದೇ ಪ್ರತೀ ವರ್ಷದಂತೆ ಈ ಬಾರಿ ಕೂಡ ಮಂಗಳೂರಿನ ಬೀದಿ ಬೀದಿಗಳನ್ನು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿದೆ. ನಗರದ ರಸ್ತೆಗಳ ಇಕ್ಕೆಲಗಳ ಕಟ್ಟಡಗಳೂ, ಮಾಲ್‌ಗಳು ಕೂಡಾ ಅಲಂಕಾರದಿಂದ ಕಂಗೊಳಿಸುತ್ತಿವೆ.
ಕಳೆದ ವರ್ಷದಂತೆ ಈ ಬಾರಿಯೂ ಲಕ್ಷಾಂತರ ವಿದ್ಯುತ್ ದೀಪಗಳನ್ನು ಮಂಗಳೂರಿನ ರಸ್ತೆಗಳ ಇಕ್ಕೆಲಗಳಲ್ಲಿ ಅಳವಡಿಸಿಲಾಗಿದ್ದು, ರಾತ್ರಿ ಪೂರ್ತಿ ನಗರ ಕಂಗೊಳಿಸುತ್ತಿದೆ. ಇದೀಗ ಮಂಗಳೂರಿನ ಜನತೆ ಕೂಡಾ ತಮ್ಮ ಸ್ವಂತ ಖರ್ಚಿನಿಂದ ತಮ್ಮ ತಮ್ಮ ಕಟ್ಟಡದ ಮೇಲ್ಭಾಗದಲ್ಲಿ ವಿದ್ಯುತ್ ಬಲ್ಬ್‌ಗಳನ್ನು ಉರಿಸುವ ಮೂಲಕ ಮಂಗಳೂರಿನ ದಸರಾ ಇನ್ನಷ್ಟು ಕಳೆ ಕಟ್ಟುವಂತೆ ಸಹಕರಿಸುತ್ತಿದ್ದಾರೆ. ಸತತ ಪರಿಶ್ರಮದ ಮೂಲಕ ಇಡೀ ನಗರದ ದಸರಾಕ್ಕೆ ಸಜ್ಜುಗೊಂಡಿದೆ.ಈ ಸುಂದರ ದೃಶ್ಯವನ್ನು ನೋಡಲೆಂದೇ ಸಹಸ್ರಾರು ಮಂದಿ ಮುಸ್ಸಂಜೆಯಾಗುತ್ತಲೇ ಕುದ್ರೋಳಿ ಕ್ಷೇತ್ರದಲ್ಲಿ ಜಮಾಯಿಸುತ್ತಾರೆ. ಪ್ರತೀ ವರ್ಷ ದಸರಾದಲ್ಲಿ ಈ ಬೆಳಕಿನ ವಿನ್ಯಾಸವೂ ಅತ್ಯಾಕರ್ಷಕವಾಗಿರುತ್ತದೆ
ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ನವರಾತ್ರಿ ಉತ್ಸವ ಇದೀಗ ವೈಭವಪೂರ್ಣ ಮಂಗಳೂರು ದಸರಾ ಆಗಿ ಹೆಸರುವಾಸಿಯಾಗುತ್ತಿದೆ. ವಿಶ್ವ ಪ್ರಸಿದ್ಧ ಮೈಸೂರು ದಸರಾವನ್ನು ಬಿಟ್ಟರೆ, ನಮಗೆ ನೆನಪಾಗುವುದು ಮಂಗಳೂರು ದಸರಾ. ಮಂಗಳೂರು ದಸರಾ ಕೂಡಾ ಇಂದು ವಿಶ್ವಪ್ರಸಿದ್ಧವಾಗುತ್ತಿದೆ. ಈ ದಸರಾವನ್ನು ವಿಶ್ವಮಟ್ಟಕ್ಕೇರಿಸಿದ ಕೀರ್ತಿ ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿಯವರದು.
ಮಂಗಳೂರು ದಸರಾ ಹಾಗೂ ಶ್ರೀ ಕ್ಷೇತ್ರದ ನವರಾತ್ರಿ ಉತ್ಸವಗಳು ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಹಾಗೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ನೆರವೇರುತ್ತವೆ. ಒಂದೇ ಮತ, ಒಂದೇ ಕುಲ, ಒಂದೇ ದೇವರು ಎಂದು ಸರ್ವ ಸಮಾನತೆಯ ಮಂತ್ರವನ್ನು ಬೋಧಿಸಿದ ನಾರಾಯಣ ಗುರುಗಳ ಸಂದೇಶವನ್ನು ಸಾರುತ್ತಾ, ಸರ್ವಸಮಾನತೆಯ ಮೂಲಕ ಎಲ್ಲರನ್ನೂ ಒಗ್ಗೂಡಿಸಿಕೊಂಡು ಇದೀಗ ಅದ್ದೂರಿಯಾಗಿ ನಡೆಯುವ ಮಂಗಳೂರು ದಸರಾ ಇಷ್ಟೊಂದು ಪ್ರಖ್ಯಾತಗೊಳ್ಳಬೇಕಾದರೆ ಅದರ ಹಿಂದೆ ಜನಾರ್ದನ ಪೂಜಾರಿಯವರ ಆಹೋರಾತ್ರಿ ದುಡಿಮೆಯ ಶ್ರಮ ಇದೆ ಎಂಬುವುದು ಖಂಡಿತ.
ಕಳೆದ ಇಪ್ಪತ್ತಮೂರು ವರ್ಷಗಳಿಂದ ನಡೆಯುತ್ತಿರುವ ಮಂಗಳೂರು ದಸರಾವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶದ ವಿವಿಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ. ಕುದ್ರೋಳಿ ಕ್ಷೇತ್ರದ ಪಕ್ಕದಲ್ಲೇ ಇರುವ ಸಭಾಂಗಣದಲ್ಲಿ ಶಾರದಾ ಮಾತೆ, ಗಣಪತಿ ಸೇರಿದಂತೆ ನವದುರ್ಗೆಯರ ಪ್ರತಿಷ್ಠಾಪನೆ ಇಲ್ಲಿ ನಡೆದು ಅಪರೂಪದ ವರ್ಣಾಲಂಕಾರವನ್ನು ಮಾಡಲಾಗುತ್ತಿದೆ. ಈ ದೃಶ್ಯವನ್ನು ನೋಡಲೆಂದು ಇಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಸ್ವರ್ಣಾಲಂಕಾರಗೊಂಡ ಮಂಟಪದಲ್ಲಿ ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ದಿದಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದ ಮಾತಾ, ಆದಿಶಕ್ತಿ ಮತ್ತು ಶೈಲಪುತ್ರಿಯರ ಅಲಂಕೃತ ವಿಗ್ರಹಗಳನ್ನು ವಿಶಿಷ್ಟ ರೀತಿಯಲ್ಲಿ ಇಟ್ಟು ಎಲ್ಲಾ ದೇವರಿಗೂ ಪ್ರತಿನಿತ್ಯ ಪೂಜೆ ಮಾಡಲಾಗುತ್ತದೆ.
ಹತ್ತು ದಿನ, ಒಂದೇ ಕಡೆ ನವದುರ್ಗೆ ಹಾಗೂ ಶಾರದಾ ಮಾತೆಯನ್ನು ಏಕಕಾಲದಲ್ಲಿ ಸಾಂಪ್ರದಾಯಿಕ ಪೂಜಾ ವಿಧಿಗಳೊಂದಿಗೆ ಪ್ರತಿಷ್ಠಾಪಿಸಿ ಪೂಜಿಸುವ ಪರಿ ಇಡೀ ವಿಶ್ವದಲ್ಲಿ ಇಲ್ಲೊಂದೇ ಕಡೆ ನೋಡಲು ಸಾಧ್ಯ. ಇಂತಹ ಮಂಗಳೂರು ದಸರಾದಲ್ಲಿ ಪಾಲ್ಗೊಳ್ಳಲು ಜನಜಂಗುಳಿಯೇ ಶ್ರೀ ಕ್ಷೇತದತ್ತ ಧಾವಿಸುತ್ತದೆ. ಕುದ್ರೋಳಿ ಕ್ಷೇತ್ರದಲ್ಲಿ ನ.25ರಿಂದ ಪ್ರಾರಂಭಗೊಳ್ಳುವ ಉತ್ಸವ ಅಕ್ಟೋಬರ್ 3ರಂದು ದಸರಾ ಮೆರವಣಿಗೆಯೊಂದಿಗೆ ಸಂಪನ್ನಗೊಳ್ಳಲಿದೆ.