ಬಂಟ್ವಾಲ; ಬಿ.ಸಿ.ರೋಡ್,ಬಂಟ್ವಾಳಕ್ಕೆ ಪೂರೈಕೆ ಆಗುವ ಅದ್ಯಾವ ವಿದ್ಯುತ್ ತಂತಿಗೆ ತುಕ್ಕು ಹಿಡಿದಿದೆಯೋ.. ಕಳೆದ ಕೆಲವು ದಿನಗಳಿಂದ ಇಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ನಿಂದಾಗಿ ವಿದ್ಯುತ್ ಗ್ರಾಹಕರು ರೋಸಿಹೋಗಿದ್ದಾರೆ. ದುರಸ್ಥಿಯ ನೆಪದಲ್ಲಿ ಮೆಸ್ಕಾಂ ತಮ್ಮ ಹಿಂದಿನ ಚಾಳಿಯಂತೆ ಮಂಗಳವಾರ ಯಾವುದೆ ಪೂರ್ವ ಸೂಚನೆ ನೀಡದೆ ಮತ್ತೆ ವಿದ್ಯುತ್ ಕಡಿತ ಆರಂಭೀಸಿದೆ.
ಸೆ.23ರಂದು (ಮಂಗಳವಾರ) ಬೆಳಿಗ್ಗೆ 10ಗಂಟೆಯಿಂದ ರಾತ್ರಿ 7 ಗಂಟೆಯವರೆಗೂ ಕಡಿತಗೊಂಡಿತ್ತು. ತದನಂತರವೂ ಹಲವು ಬಾರಿ ಕಣ್ಣುಮುಚ್ಚಾಲೆ ನಡೆಸಿ ಕೃತಾರ್ಥವಾಗಿತ್ತು. ಗ್ರಾಮೀಣ ಬಾಗದ ಹಲವಾರು ಮಂದಿ ಜನಸಾಮಾನ್ಯರು ಪಹಣಿಪತ್ರ,ಇತರ ದಾಖಲೆ ಪತ್ರಕ್ಕಾಗಿ ತಾಲೂಕು ಕಚೇರಿಗೆ ಆಗಮಿಸಿ ವಿದ್ಯುತ್ ಕಡಿತದಿಂದ ಬಂದ ದಾರಿಗೆ ಸುಂಕವಿಲ್ಲದೆ ವಾಪಾಸಾಗಬೇಕಾಯಿತು. ವಿದುತ್ತನ್ನೇ ನಂಬಿ ಕಾರ್ಯ ನಿರ್ವಹಿಸುವ ಅಂಗಡಿ ಮುಂಗಟ್ಟುಗಳು ನಯಾಪೈಸೆಯ ವ್ಯವಹಾರವಾಗದೆ ಸೊಳ್ಳೆ ಓಡಿಸಬೇಕಾಯಿತು.ಸಾಲದೆಂಬಂತೆ ಬುಧವಾರವೂ ಬೆಳಿಗ್ಗೆಯಿಂದ ರಾತ್ರಿವರೆಗೆ ಸುಮಾರು ಅರ್ಧ,ಒಂದು ತಾಸುಗಳಂತೆ ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತ ಉಂಟಾಗಿತ್ತು.ಇದಕ್ಕೆ ಮೆಸ್ಕಾಂ ಅಧಿಕಾರಿಗಳಿಂದ ಮಾಮೂಲಿಯಂತೆ ಮೇಲಿನವರ ಸೂಚನೆಯಂತೆ ಪವರ್ ಕಟ್ ಆಗುತ್ತಿದೆಯೆಂದು ಸಿದ್ದ ಉತ್ತರ ನೀಡಿ ಗ್ರಾಹಕರ ಕಿವಿಗೆ ಹೂ ಇಡಲು ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ.
ಸಚಿವರ ಕ್ಷೇತ್ರದಲ್ಲೇ ಹೀಗಾದರೆ. . .
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಸ್ವ ಕ್ಷೇತ್ರಕ್ಕೊಳಪಟ್ಟ ಬಿ.ಸಿ.ರೋಡ್,ಬಂಟ್ವಾಳದಂತ ನಗರ ಪ್ರದೇಶದಲ್ಲೇ ಮೆಸ್ಕಾಂ ಯಾವುದೇ ಪೂರ್ವ ಸೂಚನೆ ನೀಡದೆ ಮನಬಂದಂತೆ ಅನಧಿಕೃತವಾಗಿ ವಿದ್ಯುತ್ ಕಡಿತಗೊಳಿಸಿ ಗ್ರಾಹಕರನ್ನು ,ವ್ಯಾಪಾರಸ್ಥರನ್ನು ಗೋಳಾಡಿಸುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಗರ ಪ್ರದೇಶದಲ್ಲಿ ಹೀಗಾದರೆ ಗ್ರಾಮೀಣ ಭಾಗದ ಸ್ಥಿತಿ ಹೇಗಿರಬಹುದೆಂಬ ಸಾರ್ವಜನಿಕರಲ್ಲಿ ಪ್ರಶ್ನೆ ಎದುರಾಗಿದೆ. ಗುರುವಾರದಿಂದ ಎಲ್ಲೆಡೆ ನವರಾತ್ರಿ ಉತ್ಸವ ಆರಂಭವಾಗಲಿದ್ದು ಈ ಸಂದರ್ಭದಲ್ಲಿ ಅನಧಿಕೃತ ಪವರ್ ಕಟ್‌ಗೆ ಬ್ರೇಕ್ ಹಾಕುವಂತೆ ವಿದ್ಯುತ್ ಗ್ರಾಹಕರು ಆಗ್ರಹಿಸಿದ್ದಾರೆ.
ಮಾತನಾಡದಿರುದೇ ವಾಸಿ:
ಬಂಟ್ವಾಳ ಮೆಸ್ಕಾಂ ಕಾರ್ಯ ವೈಖರಿ ಬಗ್ಗೆ ಮಾತನಾಡದಿರುವುದೆ ವಾಸಿ,ಇವರು ಸರಕಾರಕ್ಕೆ ಕೆಟ್ಟ ಹೆಸರು ತರುತ್ತಾರೆ ಹೀಗಂತ ಕಳೆದವಾರ ಬಿ.ಸಿ.ರೋಡಿನಲ್ಲಿ ಸಚಿವ ರಮಾನಾಥ ರೈಯವರ ಸಮ್ಮುಖದಲ್ಲೇ ಗ್ರಾಮ ಪಂಚಾಯತ್‌ನ ಅಧ್ಯಕ್ಷ-ಉಪಾಧ್ಯಕ್ಷರ ಒಕ್ಕೂಟದ ಸಭೆಯಲ್ಲಿ ಗ್ರಾಮ ಪಂಚಾಯತ್‌ವೊಂದರ ಉಪಾಧ್ಯಕ್ಷರೊಬ್ಬರು ಮೆಸ್ಕಾಂ ಅಧಿಕಾರಿಗಳನ್ನು ನೇರ ತರಾಟೆಗೆ ತೆಗೆದುಕೊಂಡಿದ್ದರು. ಈ ಹಂತದಲ್ಲಿ ಸಚಿವರೆ ಮದ್ಯೆ ಪ್ರವೇಶಿಸಿ ಪಂಚಾಯತ್ ಉಪಾಧ್ಯಕ್ಷರನ್ನು ಸಮಾದಾನ ಪಡಿಸಿದ್ದನ್ನು ನೆನಪಿಸಬಹುದು.