ಕುಂದಾಪುರ: ಟ್ಯಾಂಕರ್ ಶುಚಿತ್ವದ ವೇಳೆ ಆಯ ತಪ್ಪಿ ವ್ಯಕ್ತಿಯೋರ್ವ ಟ್ಯಾಂಕರಿನ ಕಂಟೈನರಿನಲ್ಲಿ ಬಿದ್ದಿದ್ದು ಆತನನ್ನು ರಕ್ಷಿಸಲು ಹೊರಟ ಇನ್ನೋರ್ವ ವ್ಯಕ್ತಿ ಕಂಟೈನರಿನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಕೋಟ ಸಮೀಪದ ಫಿಶ್‌ಮಿಲ್‌ವೊಂದರಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.
ಕೋಟ-ಪಡುಕೆರೆ ನಿವಾಸಿಗಳಾದ ಅಬ್ಬಾಸ್(43) ಹಾಗೂ ಸಲಾಂ (20) ಮೃತ ದುರ್ದೈವಿಗಳಾಗಿದ್ದು ಇಬ್ಬರು ಒಂದೇ ಕುಟುಂಬದವರು ಎನ್ನಲಾಗಿದೆ.
ಘಟನೆ ವಿವರ: ಅಬ್ಬಾಸ್ ಅವರ ಟ್ಯಾಂಕರ್ ಇದಾಗಿದ್ದು ಹೊರ ಗುತ್ತಿಗೆ ಆಧಾರದಲ್ಲಿ ಕೋಟ ಮೂಲದ ಫಿಶ್ ಮೀಲೊಂದರಲ್ಲಿ ನಿರುಪಯುಕ್ತ (ತ್ಯಾಜ್ಯ)ಪದಾರ್ಥಗಳನ್ನು ಸಾಗಿಸುವ ಸಲುವಾಗಿ ಬಳಕೆ ಮಾಡಲಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಇಲ್ಲಿ ಇವರು ಗಿಉತ್ತಿಗೆ ಆಧಾರದಲ್ಲಿ ವೃತ್ತಿ ಮಾಡುತ್ತಿದ್ದರು. ಬುಧವಾರ ಕೆಲಸ ಮುಗಿಸಿ ಮನೆಯಲ್ಲಿ ಊಟ ಮಾಡಿದ ಬಳಿಕ ಟ್ಯಾಂಕರ್ ತೊಳೆಯುವ ಸಲುವಾಗಿ ಕೋಟಕ್ಕೆ ಬಂದಿದ್ದು ಬರುವ ವೇಳೆಯಲ್ಲಿ ತನ್ನ ಪತ್ನಿಯ ಅಕ್ಕನ ಮಗ ಸಲಾಂ ಎನ್ನುವಾತನನ್ನು ಜೊತೆಯಲ್ಲಿ ಕರೆತಂದಿದ್ದರು.
ಟ್ಯಾಂಕರಿನ ಒಳಭಾಗದಲ್ಲಿ ಒಟ್ಟು ಮೂರು ಕಂಟೈನರುಗಳಿದ್ದು ಎರಡನ್ನು ಶುಚಿಗೊಳಿಸಿ ಮೂರನೇ ಕಂಟೈನರ್ ಶುಚಿಗೊಳಿಸುವ ವೇಳೆ ಅಬ್ಬಾಸ್ ಆಯ ತಪ್ಪಿ ಕಂಟೈನರೊಳಗೆ ಸಿಲುಕಿದಾರೆ, ಇದನ್ನು ಗಮಸಿದ ಸಲಾಂ ಅವರನ್ನು ಎತ್ತಲು ಮುಂದಾಗಿದ್ದು ಈತನು ಆಯತಪ್ಪಿ ಬಿದ್ದಿದ್ದಾನೆ ಎನ್ನಲಾಗಿದೆ. ಸಲಾಂ ಕೂಗಿದ ಶಬ್ದ ಕೇಳಿ ಓಡಿಬಂದ ಇತರೇ ಕೆಲಸಗಾರರು ಟ್ಯಾಂಕರಿನೊಳಗೆ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು ಅಷ್ಟರಲ್ಲಾಗಲೇ ಇಬ್ಬರು ಸಾವನ್ನಪ್ಪಿದ್ದರು ಎನ್ನಲಾಗಿದೆ.
ಅಬ್ಬಾಸ್ ವಿವಾಹಿತನಾಗಿದ್ದು ಇಬ್ಬರು ಮಕ್ಕಳಿದ್ದಾರೆ.
ಘಟನಾ ಸ್ಥಳಕ್ಕೆ ಬ್ರಹ್ಮಾವರ ಸಿ.ಪಿ.ಐ. ಅರುಣ ನಾಯ್ಕ್, ಕೋಟ ಉಪನಿರೀಕ್ಷಕ ಕೆ.ಆರ್. ನಾಯ್ಕ್ ಭೇಟಿ ನೀಡಿದರು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.