ಮಂಗಳೂರು: ವೃಕ್ಷ ಬಿಸಿನೆಸ್ ಸೊಲ್ಯೂಶನ್ (ಇಂಡಿಯಾ) ಲಿಮಿ ಟೆಡ್ ಸಂಸ್ಥೆಯು ಅಮಾಯಕ ಹೆಚ್ಚಿಗೆ ಬಡ್ಡಿ ನೀಡುವ ಅಮಿಷವೊಡ್ಡಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಸಂಗ್ರಹ ಮಾಡಿ ಇದೀಗ ಏಜೆಂಟರು ಮತ್ತು ಗ್ರಾಹಕರಿಗೆ ಇನ್ನೂ ಕೂಡ ಹಣ ಮರಳಿಸದೆ ವಂಚಿಸಿರುವುದರಿಂದ ಆಕ್ರೋಷಗೊಂಡಿರುವ ಗ್ರಾಹಕರು ಹಾಗೂ ಏಜೆಂಟರು ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮತ್ತೊಮ್ಮೆ ಬೀದಿಗಿಳಿದು ಹೋರಾಟದಲ್ಲಿ ತೊಡಗಿದ್ದಾರೆ. ಮಾತ್ರವಲ್ಲದೇ ವಂಚನೆ ಎಸಗಿರುವ ವೃಕ್ಷ ಬಿಸಿನೆಸ್ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಪ್ರತಿಭಟನಕಾರರನ್ನುದ್ದೇಶಿಸಿ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ, ಅಧಿಕ ಬಡ್ಡಿ ನೀಡುವ ಆಮಿಷ ದಿಂದ ಗ್ರಾಹಕರಿಂದ ಏಜೆಂಟರು ಹಣ ಸಂಗ್ರಹಿಸಿ ವೃಕ್ಷ ಸಂಸ್ಥೆಗೆ ನೀಡಿದ್ದು ಒಂದು ವರ್ಷದಿಂದ ಹಣವನ್ನು ಮರು ಸಂದಾಯ ಮಾಡುವಂತೆ ಕೇಳಿಕೊಂಡರೂ ಸಂಸ್ಥೆ ಹಣ ಸಂದಾಯ ಮಾಡಿಲ್ಲ. ಈ ಸಂಸ್ಥೆಯಲ್ಲಿ ಹಣ ತೊಡಗಿಸಿಕೊಂಡವರಿಗೆ ಕಳೆದ ಒಂದು ವರ್ಷದಿಂದ ಮರು ಪಾವತಿಸುವುದಾಗಿ ಹೇಳಿಕೊಂಡೇ ಬಂದಿದೆ. ಆದರೆ ಹಣವನ್ನು ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ.
ಪೊಲೀಸರು ಸಂಸ್ಥೆಯ ಪಾಲುದಾರ ರಾದ ಜೀವರಾಜ್ ಪುರಾಣಿಕ್, ರೋಶನ್ ಡಿಸೋಜಾ, ವೇಣುಗೋಪಾಲ್‍ರವರ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ. ವೃಕ್ಷ ಸಂಸ್ಥೆಯು ತನ್ನ ಏಳು ಕೋಟಿ ಮಾರುಕಟ್ಟೆ ಬೆಲೆ ಬಾಳುವ ಸ್ಥಳವನ್ನು 4 ಕೋಟಿ 60 ಲಕ್ಷ ರು.ಗೆ ಮಾರಾಟ ಮಾಡಿರುವ ಬಗ್ಗೆ ತಿಳಿದು ಬಂದಾಗ ಗ್ರಾಹಕರು ಹಾಗೂ ಏಜೆಂಟರ ನೊಂದಣಿ ಪ್ರಕ್ರಿಯೆಯನ್ನು ತಡೆಯಲು ಪ್ರಯತ್ನಿಸಿದ್ದರು. ಆದರೆ ರಾಜಕೀಯ ಪ್ರಭಾವ ಬಳಸಿಕೊಂಡು ಕಂಪೆನಿಯ ಆಡಳಿತ ಮುಖ್ಯಸ್ಥರು ನೋಂದಣಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಗ್ರಾಹಕರಿಂದ ಹತ್ತು ಕೋಟಿಗೂ ಮಿಕ್ಕಿ ಸಂಗ್ರಹಿಸಿದ ಹಣವನ್ನು ಮರುಪಾವತಿ ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ವೃಕ್ಷ ಬಿಸಿನೆಸ್ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯ ಎಂಡಿ ಹಾಗೂ ನಿರ್ದೇಶಕರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಾತ್ರವಲ್ಲದೇ, ಈ ಜಾಲದ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
ವೃಕ್ಷ ಬಿಸಿನೆಸ್ ಸೊಲ್ಯೂಷನ್‌ನಲ್ಲಿ ಹಣವನ್ನು ತೊಡಗಿಸಿಕೊಂಡು ಮೋಸ ಹೋದ ಹಲವಾರು ಗ್ರಾಹಕರು ಹಾಗೂ ಏಜೆಂಟ್ ಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.