ಮಂಗಳೂರು: ಸಹಕಾರಿ ರಂಗದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆಯೊಂದಿಗೆ ಗುರುತಿಸಿಕೊಂಡಿರುವ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ಪ್ರಥಮ ಪ್ರಶಸ್ತಿ ಲಭಿಸಿದೆ.
ಗುರುವಾರ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯದ ಅತ್ಯುತ್ತಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿಯನ್ನು ಅಪೆಕ್ಸ್ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಶಿವಾನಂದ ಅಪ್ಪಾಸಾಹೇಬ ಮಾನಕರ ಇವರಿಂದ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಹಾಗೂ ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕರಾದ ಶ್ರೀ ಎಂ.ಗೋಪಾಲಕೃಷ್ಣ ಭಟ್ ಇವರು ಸ್ವೀಕರಿಸಿದರು.
2012-13 ನೇ ಸಾಲಿನಲ್ಲಿ ಸಮಾಜಮುಖಿ ಸೇವೆಗಳೊಂದಿಗೆ ಗುರುತಿಸಿಕೊಂಡ ಎಸ್‌ಸಿಡಿಸಿಸಿ ಬ್ಯಾಂಕ್ ಗಣನೀಯ ಪ್ರಗತಿಯೊಂದಿಗೆ ಸಹಕಾರ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದಿದೆ ಮಾತ್ರವಲ್ಲ ಲೆಕ್ಕಪರಿಶೋಧನೆಯಲ್ಲೂ ‘ಎ’ ವರ್ಗ ಪಡೆದು ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರವಾಗಿದೆ.
ಆಧುನಿಕ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ಠೇವಣಾತಿಯಲ್ಲೂ ಗುರಿಮೀರಿದ ಸಾಧನೆಗೈದು, ಕೃಷಿ ಸಾಲ ವಸೂಲಾತಿಯಲ್ಲಿ ಸತತ ೧೯ ವರ್ಷಗಳಿಂದ ಶೇಕಡಾ ನೂರರ ವಸೂಲಾತಿಯೊಂದಿಗೆ ರಾಷ್ಟ್ರೀಯ ದಾಖಲೆಗೈದಿದೆ. ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ|ಎಂ.ಎನ್.ರಾಜೇಂದ್ರಕುಮಾರ್ ಅವರ ದಕ್ಷ ನಾಯಕತ್ವದಲ್ಲಿ ಈ ಬ್ಯಾಂಕಿಗೆ ಸತತ ೧೬ ವರ್ಷಗಳಿಂದ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ದೊರೆಯುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಪೆಕ್ಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಜಿ ಎಸ್ ರಮಣ ರೆಡ್ಡಿ, ನಿರ್ದೇಶಕರಾದ ಡಾ|ಗುರುಪಾದಪ್ಪ ನಾಗಮಾರಪಳ್ಳಿ, ಶ್ರೀ ಕೆ ಎನ್ ರಾಜಣ್ಣ, ಶ್ರೀ ಡಿ ಸುಧಾಕರ್, ಶ್ರೀ ಶಿವಾನಂದ ಎಸ್.ಪಾಟೀಲ್, ಶ್ರೀ ರಾಮಪ್ಪ ಸಿದ್ದಪ್ಪ ತಳೇವಾಡ, ಶ್ರೀ ಪಟೇಲ್ ಶಿವರಾಮ್, ಶ್ರೀ ಹಾಲಪ್ಪ ಬಸಪ್ಪ ಆಚಾರ್,ಶ್ರೀ ಚೊಕ್ಕ ಬಸವನ ಗೌಡ, ಶ್ರೀ ಬಿ ಸಿದ್ದರಾಜು, ಶ್ರೀ ಎಂ.ಎ.ರಮೇಶ್ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥ್ತಿತರಿದ್ದರು.