ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಶ್ರೀ ಶಾರದಾ ಮಾತೆ, ಶ್ರೀ ಗಣಪತಿ ಹಾಗೂ ನವದುರ್ಗೆಯರ ಪ್ರತಿಷ್ಟಾಪನಾ ಕಾರ್ಯಕ್ರಮ ಗುರುವಾರ ನೆರವೇರಿತು. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಮಹಾಬಲ ಮಾರ್ಲ ಹಾಗೂ ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸಹ ಅಧ್ಯಕ್ಷರಾದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ಅವರು ದೀಪ ಪ್ರಜ್ವಲನಗೊಳಿಸುವ ಮೂಲಕ ಪ್ರತಿಷ್ಟಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಚೆಂಡೆವಾದನ , ಹುಲಿವೇಷದ ಮೆರವಣಿಗೆ ಯೊಂದಿಗೆ ಶ್ರೀ ಕ್ಷೇತ್ರಕ್ಕೆ ಶಾರದಾ ಮಾತೆಯ ವಿಗ್ರಹ, ಗಣಪತಿ, ನವದುರ್ಗೆಯರಾದ ಬ್ರಹ್ಮಚಾರಿಣಿ, ಚಂದ್ರಘಟ, ಕುಷ್ಮಾಂಡಿನಿ, ಸಿದ್ಧಿ ದಾತ್ರಿ,ಮಹಾಗೌರಿ, ಮಹಾಕಾಳಿ, ಕಾತ್ಯಾಯನಿ, ಸ್ಕಂದಮಾತ, ಅದಿಶಕ್ತಿ, ಶೈಲಪುತ್ರಿಯರ ವಿಗ್ರಹಗಳನ್ನು ಧಾರ್ಮಿಕ ಪೂಜಾವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಬಳಿಕ ಮಹಾಪೂಜೆ ನೆರವೇರಿತು.
ಶ್ರೀಮತಿ ಮಾಲತಿ ಜನಾರ್ದನ ಪೂಜಾರಿ, ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕುಳೂರು, ಕೋಶಾಧಿಕಾರಿ ಪದ್ಮರಾಜ್.ಆರ್ ( ನ್ಯಾಯವಾದಿ), ಟ್ರಸ್ಟಿಗಳಾದ ಬಿ.ಕೆ. ತಾರಾನಾಥ್, ರವಿಶಂಕರ್ ಮಿಜಾರ್, ಕೆ. ಮಹೇಶ್ಚಂದ್ರ, ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಡಾ.ಬಿ.ಜಿ.ಸುವರ್ಣ, ಲೀಲಾಕ್ಷ ಕರ್ಕೇರಾ, ಎ.ಸಿ.ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಅಕ್ಟೋಬರ್ 27 : ಮಂಗಳೂರು ದಸರಾಕ್ಕೆ ಸಿ.ಎಮ್, ಸಿದ್ದರಾಮಯ್ಯರವರಿಂದ ಚಾಲನೆ
ಮಂಗಳೂರು ದಸರಾ ಎಂದೇ ಪ್ರಖ್ಯಾತಿ ಹೊಂದಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ಇಂದಿನಿಂದ ಪ್ರಾರಂಭಗೊಂಡು ಅಕ್ಟೋಬರ್.5ರವರೆಗೆ ಶ್ರೀ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ವೈಭವೋಪೇತ ವಿಶಿಷ್ಟ ಆಕರ್ಷಣೆಯೊಂದಿಗೆ ಜರಗಲಿದೆ. ದಸರಾ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ದಿನಾ ನಿತ್ಯ ಶ್ರೀ ಮಹಾಗಣಪತಿ, ನವದುರ್ಗೆ ಹಾಗೂ ಶ್ರೀ ಶಾರದಾ ಮಾತೆಗೆ ಪುಷ್ಪಾಲಂಕಾರ ಮಹಾಪೂಜೆ ನೆರವೇರಲಿದೆ. ಮಾತ್ರವಲ್ಲದೇ ಶ್ರೀ ಕ್ಷೇತ್ರದಲ್ಲಿ ಪ್ರತಿ ದಿನಾ ಸಂಜೆ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ.
ಅಕ್ಟೋಬರ್ 27ರಂದು 102ನೇ ವಾರ್ಷಿಕ ಉತ್ಸವದ ಉದ್ಘಾಟನೆ ನೆರವೇರಲಿದೆ. ಅ ದಿನ ಸಂಜೆ 6.30ಕ್ಕೆ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಮಂಗಳೂರು ದಸರಾವನ್ನು ಉದ್ಘಾಟಿಸಲಿರುವರು. ಶ್ರೀ ಕ್ಷೇತ್ರದ ಜಿರ್ಣೋದ್ಧಾರ ಹಾಗೂ ಮಂಗಳೂರು ದಸರಾದ ರೂವಾರಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿಯವರು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು.
ಆಕ್ಟೋಬರ್ 4ರಂದು ಶನಿವಾರ ಸಂಜೆ ನಾಲ್ಕು ಗಂಟೆಗೆ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಿಂದ ಅತ್ಯಾಕರ್ಷಕ ಹಾಗೂ “ಅಭೂತಪೂರ್ವ ಬೃಹತ್ ಮಂಗಳೂರು ದಸರಾ ಮೆರವಣಿಗೆ” ಆರಂಭಗೊಳ್ಳಲಿದೆ.