ಮಂಗಳೂರು, ಸೆ.25, ಕರ್ನಾಟಕ ವಾರ್ತೆ: ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಗಳಿಗೆ ಪೊಲೀಸ್ ಬೆಂಗಾವಲು ಕೊರತೆಯಿಂದ ಜೈಲಿನಿಂದ ಕೈದಿಗಳನ್ನು ಹಾಜರುಪಡಿಸಲು ವಿಳಂಭವಾಗುತ್ತಿರುವುದರಿಂದ ಕೇಸುಗಳ ತ್ವರಿತ ವಿಲೇವಾರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ಬೆಂಗಾವಲು ಪೂರೈಸಲು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಉಮಾ ಎಂ.ಜಿ. ಸೂಚನೆ ನೀಡಿದ್ದಾರೆ.
ಅವರು ಗುರುವಾರ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಕಾರಾಗೃಹ ಸಂದರ್ಶಕ ಮಂಡಳಿಯ ಸಭೆಯಲ್ಲಿ ಮಾತನಾಡಿದರು. ಮಂಗಳೂರು ನಗರ ವ್ಯಾಪ್ತಿಯ ಪ್ರಕರಣಗಳಲ್ಲಿ ಬೆಂಗಾವಲು ಸಮಸ್ಯೆ ಇಲ್ಲ. ಆದರೆ ತಾಲೂಕು ಮಟ್ಟದ ನ್ಯಾಯಾಲಯಗಳಲ್ಲಿರುವ ಪ್ರಕರಣಗಳಿಗೆ ನಗರದ ಕಾರಾಗೃಹದಿಂದ ಕೈದಿಗಳನ್ನು ಹಾಜರುಪಡಿಸಲು ವಿಳಂಭವಾಗುತ್ತಿವೆ ಎಂದ ಅವರು, ವೀಡಿಯೋ ಕಾನ್ಫೆರೆನ್ಸ್ ಮೂಲಕ ನಡೆಯುವ ವಿಚಾರಣೆಗಳಿಗೆ ಕೈದಿಗಳನ್ನು ನ್ಯಾಯಲಯಗಳಿಗೆ ಹಾಜರುಪಡಿಸಬೇಕಾಗಿಲ್ಲ. ಕೈದಿಗಳನ್ನು ಹಾಜರುಪಡಿಸಲು ಅಸಾಧ್ಯವಿದ್ದಲ್ಲಿ, ಆ ಬಗ್ಗೆ ಮುಂಚಿತವಾಗಿಯೇ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಅವರು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಮಾತನಾಡಿ, ವೆನ್‌ಲಾಕ್ ಆಸ್ಪತ್ರೆಯಲ್ಲಿ ಈಗಿರುವ ಜೈಲುವಾರ್ಡನ್ನು ವಿಸ್ತರಿಸಬೇಕಾಗಿದೆ. ಅಲ್ಲದೆ, ಮಹಿಳಾ ಖೈದಿಗಳಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡನ್ನು ತೆರೆಯಲು ಕ್ರಮ ಕೈಗೊಳ್ಳುವಂತೆ ವೆನ್‌ಲಾಕ್ ಅಧೀಕ್ಷಕರಿಗೆ ಸೂಚಿಸಿದರು. ಅಲ್ಲದೆ, ಕಾರಾಗೃಹದಲ್ಲಿರುವ ಮಹಿಳೆಯರ ಚಿಕಿತ್ಸೆಗೆ ಮಹಿಳಾ ವೈದ್ಯರನ್ನು ನಿಯೋಜಿಸಲು ಸೂಚಿಸಿದರು.
ಜೈಲಿನಲ್ಲಿ ಪ್ರಸ್ತುತ 366 ಪುರುಷ ಹಾಗೂ 11 ಮಹಿಳಾ ಕೈದಿಗಳಿದ್ದಾರೆ. ಸಿಸಿಟಿವಿಯನ್ನು ಈಗಾಗಲೇ ಅಳವಡಿಸಲಾಗಿದೆ. ಫಾರ್‍ಮಾಸಿಸ್ಟ್ ಹುದ್ದೆ ತುಂಬುವ ಕಾರ್ಯ ಪ್ರಗತಿಯಲ್ಲಿದೆ. ಕಾರಾಗೃಹದ ಕಾಮಗಾರಿಗಳ ಬಾಕಿ ಮೊತ್ತದ ಪಾವತಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿಗಳು, ಜೈಲಿನ ಹೊರ ಆವರಣದ ಸುತ್ತ ಸ್ವಚ್ಛತಾ ಕಾರ್ಯವನ್ನು ಮತ್ತು ರಸ್ತೆ ಡಾಂಬರೀಕರಣವನ್ನು ಮಹಾನಗರಪಾಲಿಕೆಯಿಂದ ನಡೆಸುವಂತೆ ಸೂಚಿಸಿದರು.
ಜೈಲಿನ ಸೆಲ್ ಒಳಗಡೆ ಮೇಲೆ ಇರುವ ಕಿಟಕಿಗಳಿಗೆ ದಪ್ಪನೆಯ ಕಬ್ಬಿಣದ ಜಾಲಿಯನ್ನು ಹೊರಭಾಗದಿಂದ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಜೈಲು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಕುಮಾರ್, ಮಹಾನಗರಪಾಲಿಕೆ ಪ್ರಭಾರ ಆಯುಕ್ತ ಗೋಕುಲದಾಸ್ ನಾಯಕ್, ಡಿಸಿಪಿ ಡಾ.ಜಗದೀಶ್, ವೆನ್‌ಲಾಕ್ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ಕಾರಾಗೃಹ ಅಧೀಕ್ಷಕ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಮತ್ತು ಜಿಲ್ಲಾಧಿಕಾರಿಗಳು ಅಧಿಕಾರಿಗಳೊಂದಿಗೆ ಜೈಲಿನ ವಿವಿಧ ಸೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.