ಮಂಗಳೂರು : ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಬ್ರಹ್ಮಾವರದ ಬೆಣ್ಣೆಕುದ್ರು ಶ್ರೀ ಕುಲಮಹಾಸತ್ರಿ ಅಮ್ಮ ದೇವಾಲಯದ ಗುರುಪೀಠವನ್ನು ಉದ್ಘಾಟಿಸಲು ಮಂಗಳೂರು ಬಜ್ಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶಾಸಕರಾದ ಮೊಯ್ದಿನ್ ಬಾವ, ವಿನಯ ಸೊರಕೆ,ಮಂಗಳೂರು ಮೇಯರ್ ಮಹಾಬಲ ಮಾರ್ಲಾ ಮುಂತಾದವರು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನೇತ್ರಾವತಿ ನದಿ ತಿರುವು ಯೋಜನೆಯಿಂದ ಕರಾವಳಿ ಭಾಗದ ಜನತೆಗೆ ಯಾವುದೇ ರೀತಿಯ ತೊಂದರೆ ಬರದಂತೆ ನೋಡಿಕೊಳ್ಳಲಾಗುವುದು. ಇಲ್ಲಿಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪರಿಸರವಾದಿಗಳ ಸಭೆ ಕರೆದು ಅವರ ಜೊತೆ ಚರ್ಚಿಸಿ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ ಮುಖ್ಯಮಂತ್ರಿಗಳು, ಯಾವುದೇ ಕಾರಣಕ್ಕೂ ನೈತಿಕ ಪೊಲೀಸ್ ಗಿರಿಯನ್ನು ಸಹಿಸುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಪೊಲೀಸ್ ಇಲಾಖೆಗೆ ಸೂಚನೆ ಕೊಡಲಾಗಿದೆ ಎಂದರು. ಈಗಲೂ ಕೆಲವು ಕಡೆಗಳಲ್ಲಿ ಇಂತಹ ಘಟನೆಗಳು ನಡೆದಿರುವುದು ಗಮನಕ್ಕೆ ಬಂದಿದೆ, ಮುಂದಿನ ದಿನಗಳಲ್ಲಿ ಇದು ಮರುಕಳಿಸದಂತೆ ಕಟ್ಟುನಿಟ್ಟಿನಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಮಡೆಸ್ನಾನದ ಬಗ್ಗೆ ನ್ಯಾಯಾಲಯ ನೀಡಿರುವ ತೀರ್ಪಿನಂತೆ ನಡೆದುಕೊಳ್ಳುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಇಂಥ ಪದ್ಧತಿಗಳ ಆಚರಣೆ ಸಮಂಜಸವಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಕೇಸಿನ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಬಿಗಿ ಭದ್ರತೆ ಆಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ತೊಂದರೆ ಬರದಂತೆ ಸೂಕ್ತ ಮುಂಜಾಗೃತ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ ಸಿದ್ಧರಾಮಯ್ಯನವರು, ತಮಿಳು ನಾಡಿನಿಂದ ಸಾವಿರಾರು ಜನ ಬೆಂಗಳೂರಿಗೆ ಬಂದಿದ್ದು ಶಾಂತಿ ಸುವ್ಯವಸ್ಥೆಗೆ ದಕ್ಕೆಯಾಗದಂತೆ ಭದ್ರತೆ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಅಕ್ರಮ ಆಸ್ತಿಗಳಿಕೆ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ನ್ಯಾಯಾಲಯ ನೀಡ ಬಹುದಾದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.