ವರದಿ ಹಾಗೂ ವಿಶೇಷ ಚಿತ್ರಗಳು : ಸತೀಶ್ ಕಾಪಿಕಾಡ್
ಮಂಗಳೂರು, ಸೆ.27 : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ 9 ದಿನಗಳ ಕಾಲ ನಡೆಯಲಿರುವ “ಮಂಗಳೂರು ದಸರಾ”ವನ್ನು ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಶನಿವಾರ ಸಂಜೆ ಉದ್ಘಾಟಿಸಿದರು.
ಸರಿಯಾಗಿ 6.30ಕ್ಕೆ ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್.ಆರ್ ಅವರು ಹೂ ಗುಛ್ಚ ನೀಡಿ ಸ್ವಾಗತಿಸಿದರು. ಬಳಿಕ ಮುಖ್ಯಮಂತ್ರಿಗಳು ಶ್ರೀ ಕ್ಷೇತ್ರದಲ್ಲಿ ಆರಾಧಿಸಲ್ಪಡುವ ಎಲ್ಲಾ ದೇವರ ಸನ್ನಿದಿಗಳಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಶ್ರೀ ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ತದ ನಂತರ ನವರಾತ್ರಿ ಪ್ರಯುಕ್ತ ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಶ್ರೀ ಶಾರಾದೆ ಮಾತೆ, ಶ್ರೀ ಗಣಪತಿ ಹಾಗೂ ನವದುರ್ಗೆಯರ ಮೂರ್ತಿಗಳನ್ನು ವೀಕ್ಷಿಸಿದರು.
ಬಳಿಕ ಕ್ಷೇತ್ರದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ದೀಪ ಪ್ರಜ್ವನಾಗೊಳಿಸಿದ ಮುಖ್ಯಮಂತ್ರಿಗಳು ಹಳದಿ ಧ್ವಜವನ್ನು ಆಡಳಿತ ಮಂಡಳಿ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್ ಅವರಿಗೆ ನೀಡುವ ಮೂಲಕ ” ಮಂಗಳೂರು ದಸರಾಕ್ಕೆ ಚಾಲನೆ ನೀಡಿದರು.
ಶ್ರೀ ಕ್ಷೇತ್ರದ ಜಿರ್ಣೋದ್ಧಾರ ಹಾಗೂ ಮಂಗಳೂರು ದಸರಾದ ರೂವಾರಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಕೇಂದ್ರ ಸಚಿವ, ಸಂಸದ ಆಸ್ಕರ್ ಫೆರ್ನಾಂಡಿಸ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು,ಟಿ ಖಾದರ್, ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಸೊರಕೆ, ಶಾಸಕರುಗಳಾದ ಜೆ.ಆರ್.ಲೋಬೋ, ಮೊಯ್ದಿನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಂಗಳೂರು ಮೇಯರ್ ಮಹಾಬಲ ಮಾರ್ಲ, ಉಪ ಮೇಯರ್ ಶ್ರೀಮತಿ ಕವಿತಾ, ಶ್ರೀಮತಿ ಬ್ಲೋಸಂ ಫೆರ್ನಾಂಡಿಸ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಜಯ.ಸಿ.ಸುವರ್ಣ, ಸಹ ಅಧ್ಯಕ್ಷರಾದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕುಳೂರು, ಕೋಶಾಧಿಕಾರಿ ಪದ್ಮರಾಜ್.ಆರ್ ( ನ್ಯಾಯವಾದಿ), ಟ್ರಸ್ಟಿಗಳಾದ ಬಿ.ಕೆ. ತಾರಾನಾಥ್, ರವಿಶಂಕರ್ ಮಿಜಾರ್, ಕೆ. ಮಹೇಶ್ಚಂದ್ರ, ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಡಾ.ಬಿ.ಜಿ.ಸುವರ್ಣ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೈಭವೋಪೇತ ಮಂಗಳೂರು ದಸರಾ :
ಮಂಗಳೂರು ದಸರಾ ಎಂದೇ ಪ್ರಖ್ಯಾತಿ ಹೊಂದಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆಪ್ಟಂಬರ್ 25 ರಂದು ಶ್ರೀ ಶಾರದಾ ಮಾತೆಯ ವಿಗ್ರಹ, ಗಣಪತಿ, ನವದುರ್ಗೆಯರಾದ ಬ್ರಹ್ಮಚಾರಿಣಿ, ಚಂದ್ರಘಟ, ಕುಷ್ಮಾಂಡಿನಿ, ಸಿದ್ಧಿ ದಾತ್ರಿ,ಮಹಾಗೌರಿ, ಮಹಾಕಾಳಿ, ಕಾತ್ಯಾಯನಿ, ಸ್ಕಂದಮಾತ, ಅದಿಶಕ್ತಿ, ಶೈಲಪುತ್ರಿಯರ ವಿಗ್ರಹಗಳ ಪ್ರತಿಷ್ಟಾಪನೆಯೊಂದಿಗೆ ನವರಾತ್ರಿ ಉತ್ಸವವು ಆರಂಭಗೊಂಡಿದ್ದು, ಅಕ್ಟೋಬರ್.5ರವರೆಗೆ ಶ್ರೀ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ವೈಭವೋಪೇತ ವಿಶಿಷ್ಟ ಆಕರ್ಷಣೆಯೊಂದಿಗೆ ನವರಾತ್ರಿ ಮಹೋತ್ಸವ ಜರಗಲಿದೆ.
ದಸರಾ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ದಿನಾ ನಿತ್ಯ ಶ್ರೀ ಮಹಾಗಣಪತಿ, ನವದುರ್ಗೆ ಹಾಗೂ ಶ್ರೀ ಶಾರದಾ ಮಾತೆಗೆ ಪುಷ್ಪಾಲಂಕಾರ ಮಹಾಪೂಜೆ ನೆರವೇರಲಿದೆ. ಮಾತ್ರವಲ್ಲದೇ ಶ್ರೀ ಕ್ಷೇತ್ರದಲ್ಲಿ ಪ್ರತಿ ದಿನಾ ಸಂಜೆ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ.
ವರದಿ ಹಾಗೂ ವಿಶೇಷ ಚಿತ್ರಗಳು : ಸತೀಶ್ ಕಾಪಿಕಾಡ್
ಹೆಚ್ಚಿನ ವಿವರ ನಿರೀಕ್ಷಿಸಿ…