ಬೆಂಗಳೂರು: ದೇಶದ ಇಬ್ಬರು ಪ್ರಮುಖ ‘ಕುಮಾರಿ’ ರಾಜಕಾರಣಿಗಳನ್ನು ಜೈಲಿಗೆ ಕಳಿಸುವ ಮೂಲಕ ದೇಶದ ಗಮನ ಸೆಳೆದಿರುವ ನ್ಯಾಯಾಧೀಶ ಮೈಕೆಲ್ ಡಿ ಕುನ್ಹ ಶುದ್ಧಹಸ್ತ ಮತ್ತು ಪ್ರಾಮಾಣಿಕತೆಗೆ ಹೆಸರಾದವರು.
ಮೂಲತಃ ಮಂಗಳೂರಿನ ಗುರುಪುರ ಕೈಕಂಬದ ಕೃಷಿಕ ಕುಟುಂಬದಲ್ಲಿ ಜನಿಸಿದ ಮೈಕೆಲ್ ಡಿ ಕುನ್ಹ ಅವರು ಜಯಲಲಿತಾ ಪ್ರಕರಣದ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗುವ ಮುನ್ನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶರಾಗಿದ್ದವರು.
ಹುಬ್ಬಳ್ಳಿಯಲ್ಲಿ ನ್ಯಾಯಾಧೀಶರಾಗಿ ನೀಡಿದ ಐತಿಹಾಸಿಕ ಆದೇಶಗಳಲ್ಲಿ ಉಮಾ ಭಾರತಿಗೆ ಶಿಕ್ಷೆ ವಿಧಿಸಿದ್ದೂ ಒಂದು. 56 ವರ್ಷದ ಡಿಕುನ್ಹ ಅವರು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ರ್‍ಯಾಂಕ್ ವಿದ್ಯಾರ್ಥಿ. 1984ರಲ್ಲಿ ಪದವಿ ಪೂರೈಸಿದ ನಂತರ ಮಂಗಳೂರಿನಲ್ಲಿ ಎ.ಜಿ.ಮಥಾಯ್ ಅವರ ಬಳಿ ಕಿರಿಯ ವಕೀಲರಾಗಿ ವಕೀಲಿ ವೃತ್ತಿ ಆರಂಭಿಸಿದರು.
‘ಮನು’ ಪರಿವಾರ:ಮಂಗಳೂರಿನಲ್ಲಿ 1994ರಲ್ಲಿ ನಾಲ್ಕು ಮಂದಿ ವಕೀಲರು ಸೇರಿ ಆರಂಭಿಸಿದ ‘ಮನು ಅಸೋಸಿಯೇಟ್ಸ್’ ನಲ್ಲಿ ಮೈಕೆಲ್ ಡಿಕುನ್ಹ ಕೂಡಾ ಒಬ್ಬರು. ಅಮೃತ್ ಕಿಣಿ, ಎಂ.ಪಿ.ನರೋನಾ ಮತ್ತು ಉಳ್ಳಾಲ್ ಎಸ್.ಕೆ. ಹೆಸರಿನ ಸಹೋದ್ಯೋಗಿಳೊಂದಿಗೆ ಬೆಳೆದ ಈ ಮನು ಪರಿವಾರದಲ್ಲಿ ಡಿಕುನ್ಹ 97ರವರೆಗೂ ಇದ್ದರು. ನಂತರ ಬೆಂಗಳೂರಿಗೆ ಬಂದು ವೃತ್ತಿ ಮುಂದುವರಿಸಿದರು.
ತಮ್ಮ ನಿಷ್ಠೆ ಮತ್ತು ವೃತ್ತಿಯ ಘನತೆಗೆ ಮೆರುಗು ನೀಡುತ್ತಿದ್ದ ಮೈಕೆಲ್ ಡಿಕುನ್ಹ ಮೂರೇ ವರ್ಷಗಳ ಅವಧಿಯಲ್ಲಿ ನೇರವಾಗಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನೇಮಕಗೊಂಡರು. ಮೊದಲಿಗೆ ಬಳ್ಳಾರಿ ನಂತರ ಧಾರವಾಡ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸಿದ ಅವರು ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿ ವರ್ಗವಾದರು. ಈ ಸಂದರ್ಭದಲ್ಲಿ ಜಯಲಲಿತಾ ಪ್ರಕರಣದ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿ 2012ರ ಅಕ್ಟೋಬರ್ 6ರಂದು ನೇಮಕಗೊಂಡರು.