ಬಂಟ್ವಾಳ, ಸೆ.29: ರಸ್ತೆ ಅಪಘಾತವೊಂದರಲ್ಲಿ ಬೈಕ್ ಸವಾರರೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ರವಿವಾರ ಬೆಳಿಗ್ಗೆ ಕಲ್ಲಡ್ಕ ಸಮೀಪದ ಮಾಣಿಯಲ್ಲಿ ಸಂಭವಿಸಿದೆ. ಕಬಕ ಕಂಬಳಬೆಟ್ಟುವಿನ ನೇರ್ಲಾಜೆ ನಿವಾಸಿ ಬಾಬು ಪೂಜಾರಿ ಎಂಬವರ ಪುತ್ರ ಹರೀಶ ಪೂಜಾರಿ (28) ಎಂಬವರೇ ಅಪಘಾತಕ್ಕೆ ಬಲಿಯಾದ ದುರ್ದೈವಿ.
ಮಾಣಿ ಸಮೀಪದ ಅಳೀರ ಎಂಬಲ್ಲಿ ಫರ್ನಿಚರ್ ಅಂಗಡಿಯನ್ನು ನಡೆಸುತ್ತಿದ್ದ ಹರೀಶ ಪೂಜಾರಿ, ರವಿವಾರ ಬೆಳಿಗ್ಗೆ ಮಾಣಿ ಕಡೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಆಲ್ಟೋ ಕಾರೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿದ್ದ ಇವರ ಬೈಕ್ ಆಲ್ಟೋ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದಿದ್ದು, ಇದೇ ವೇಳೆ ನಿಯಂತ್ರಣ ತಪ್ಪಿದ ಇವರು ಮಾಣಿ ಕಡೆಯಿಂದ ಬರುತ್ತಿದ್ದ ಸರಕಾರಿ ಬಸ್‌ನ ಬಲಬದಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಬಸ್ಸಿನಡಿಗೆ ಸಿಲುಕಿದರು.
ಘಟನೆಯ ತೀವ್ರತೆಗೆ ಬಸ್ಸಿನ ಚಕ್ರ ಇವರ ತಲೆಮೇಲಿಂದ ಹಾದುಹೋಗಿದ್ದು, ಹರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸರು ಸ್ಥಳಪರಿಶೀಲನೆ ನಡೆಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.